ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಸಿಯಾನ್(ASEAN) ಶೃಂಗಸಭೆಗೆ ಮಲೇಷ್ಯಾಕ್ಕೆ ಹೋಗದಿರಲು ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರಿಂದ ಮೂಲೆಗುಂಪಾಗಲು ಬಯಸುವುದಿಲ್ಲ ಎಂದು ಕಾಂಗ್ರೆಸ್ ಗುರುವಾರ (ಅಕ್ಟೋಬರ್,23) ವ್ಯಂಗ್ಯವಾಡಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸಾಮಾಜಿಕ ಮಾಧ್ಯಮದಲ್ಲಿ ಅಧ್ಯಕ್ಷ ಟ್ರಂಪ್ ಹೊಗಳುವ ಸಂದೇಶಗಳನ್ನು ಪೋಸ್ಟ್ ಮಾಡುವುದು ಒಂದು ವಿಷಯವಾಗಿದೆ. ಆದರೆ 53 ಬಾರಿ ಆಪ್ ಸಿಂಧೂರವನ್ನು ನಿಲ್ಲಿಸಿದ್ದೇನೆ ಎಂದು ಮತ್ತು 5 ಬಾರಿ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದೆ ಎಂದು ಹೇಳಿಕೊಂಡಿರುವ ವ್ಯಕ್ತಿಯೊಂದಿಗೆ ದೈಹಿಕವಾಗಿ ಸಹಬಾಳ್ವೆ ನಡೆಸುವುದು ಇನ್ನೊಂದು ವಿಷಯ. ಇದು ಮೋದಿಗೆ ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ರಮೇಶ್, ಪ್ರಧಾನಿ ಹೋಗುವುದಿಲ್ಲ ಎಂಬುದು ಈಗ ಖಚಿತವಾಗಿದೆ ಎಂದು ತಿಳಿಸಿದ್ದಾರೆ. ಇದರರ್ಥ ವಿಶ್ವ ನಾಯಕರನ್ನು ಅಪ್ಪಿಕೊಂಡು ಛಾಯಾಚಿತ್ರ ತೆಗೆಸಿಕೊಳ್ಳುವ ಸ್ವಯಂ ಘೋಷಿತ ವಿಶ್ವಗುರು ಎಂದು ಬಿಂಬಿಸಿಕೊಳ್ಳುವ ಹಲವು ಅವಕಾಶಗಳನ್ನು ಕಳೆದುಕೊಳ್ಳುವುದು ಎಂದರ್ಥ ಎಂದು ಕಾಂಗ್ರೆಸ್ ನಾಯಕ ಕಿಡಿಕಾರಿದ್ದಾರೆ.
ಮೋದಿ ಹೋಗದಿರಲು ಕಾರಣ ಸರಳವಾಗಿದೆ. ಟ್ರಂಪ್ ಕೂಡ ಅಲ್ಲಿಯೇ ಇರುತ್ತಾರೆ. ಆದ್ದರಿಂದ ಮೋದಿ ಮೂಲೆಗುಂಪಾಗಲು ಬಯಸುವುದಿಲ್ಲ. ಅಲ್ಲದೆ, ಕೆಲವು ವಾರಗಳ ಹಿಂದೆ ಈಜಿಪ್ಟ್‌ನಲ್ಲಿ ನಡೆದ ಗಾಜಾ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನವನ್ನು ಪ್ರಧಾನಿ ನಿರಾಕರಿಸಿದರು ಎಂದು ರಮೇಶ್ ಹೇಳಿದರು.
ಪ್ರಧಾನಿಯವರು ಆ ಹಳೆಯ ಬಾಲಿವುಡ್ ಹಿಟ್ ಹಾಡನ್ನು ನೆನಪಿಸಿಕೊಳ್ಳುತ್ತಿರಬಹುದು, ಬಚ್ಕೆ ರೆಹನಾ ರೇ ಬಾಬಾ, ಬಚ್ಕೆ ರೆಹನಾ ರೇ, ಎಂದು ಮೋದಿಯನ್ನು ರಮೇಶ್ ಕಾಲೆದಿದ್ದಾರೆ.
ಭಾನುವಾರ (ಅಕ್ಟೋಬರ್,26) ಪ್ರಾರಂಭವಾಗುವ ಆಸಿಯಾನ್ ಶೃಂಗಸಭೆಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸಲು ಮೋದಿ ವೇಳಾಪಟ್ಟಿ ಸಮಸ್ಯೆಗಳಿಂದಾಗಿ ಮಲೇಷ್ಯಾಕ್ಕೆ ಭೌತಿಕವಾಗಿ ಪ್ರಯಾಣಿಸುತ್ತಿಲ್ಲ ಎಂದು ವರದಿಯಾಗಿದೆ.
ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಶೃಂಗಸಭೆಯು ಅಕ್ಟೋಬರ್ 26 ರಿಂದ 28 ರವರೆಗೆ ಕೌಲಾಲಂಪುರದಲ್ಲಿ ನಡೆಯಲಿದೆ. (ಏಜೆನ್ಸೀಸ್)