ಯಳಂದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮವನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಉದ್ಘಾಟಿಸಿದರು.
ವಿಜಯವಾಣಿ ಸುದ್ದಿಜಾಲ ಯಳಂದೂರು
ಎಲ್ಲ ಸಮುದಾಯಗಳ ಸಾಮಾಜಿಕ ಸಮಾನತೆಗಾಗಿ ದುಡಿದ ಮಹಾನ್ ರಾಜಕಾರಣಿ ಡಾ. ಬಾಬು ಜಗಜೀವನರಾಮ್ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಭಾನುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಭಾರತ ಕಂಡ ಶೋಷಿತ ಸಮುದಾಯದ ಎರಡು ಪ್ರಮುಖ ಧ್ವನಿಗಳಾಗಿದ್ದರು. ಬಾಬು ಜಗಜೀವನರಾಮ್ ಭಾರತವನ್ನು ಹಸಿವುಮುಕ್ತ ಮಾಡಿ, ಹಸಿರು ಕ್ರಾಂತಿಗೆ ನಾಂದಿ ಹಾಡಿದ್ದರು. ಅಲ್ಲದೆ ರಕ್ಷಣಾ ಮಂತ್ರಿಯಾಗಿದ್ದಾಗ ಪಾಕಿಸ್ತಾನದೊಂದಿಗೆ ಯುದ್ಧದ ಗೆಲುವಿನಲ್ಲಿ ಪ್ರತ್ಯೇಕ ಬಾಂಗ್ಲಾದೇಶ ನಿರ್ಮಾಣದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯೊಂದಿಗೆ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. ಸಂಸ್ಕೃತ ಹಾಗೂ ಆಂಗ್ಲಭಾಷೆಯಲ್ಲಿ ಪಾಂಡಿತ್ಯ ಸಾಧಿಸಿದ್ದರು. ಶೋಷಿತ ಸಮುದಾಯದ ಏಳಿಗೆಗೆ ಕ್ರಾಂತಿಕಾರಕ ನೀತಿಗಳನ್ನು ಅಳವಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳು ನಮಗೆ ಆದರ್ಶವಾಗಬೇಕು ಎಂದರು.
ಮುಖ್ಯ ಭಾಷಣಕಾರ ಹನೂರು ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಜಿ. ಲೋಕೇಶ್ ಮಾತನಾಡಿ, ಸ್ವಾತಂತ್ರೃ ಹೋರಾಟಗಾರರಾಗಿ, ಭಾರತದ ಮೊದಲ ಕಾರ್ಮಿಕ ಸಚಿವರಾಗಿದ್ದ ಇವರು, ದೇಶದಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಿದ ಮೊದಲ ಸಚಿವವರಾಗಿದ್ದಾರೆ. ದೇಶವನ್ನು ಹಸಿವುಮುಕ್ತ ಮಾಡುವ ನಿಟ್ಟಿನಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಅಂದಿನ ಕಾಲದಲ್ಲಿ ದೇಶದ ಜನತೆಯ ಹೊಟ್ಟೆ ತುಂಬಿಸಿ ಹಸಿರು ಕ್ರಾಂತಿ ಮಾಡಿದ ಮೊದಲಿಗರಾಗಿದ್ದರು. ಪ್ರಸ್ತುತ ದಿನಮಾನಕ್ಕೆ ಇವರ ಮಾರ್ಗದರ್ಶನದ ಅನುಕರಣೆ ಇತರ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿ.ಪಂ. ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಹಸೀಲ್ದಾರ್ ಎಸ್.ಎಲ್. ನಯನಾ, ಇಒ ಎ.ಬಿ. ವೇಣು, ಪ.ಪಂ. ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ. ಕೇಶವಮೂರ್ತಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮ್ಮನಪುರ ಮಹೇಶ್, ಎಇಇ ಚಂದ್ರಶೇಖರಮೂರ್ತಿ ಮರಪ್ಪ, ಪಪಂ ನಾಮನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್ ಸೇರಿದಂತೆ ಇತರರಿದ್ದರು.