ನ್ಯೂಸ್

ಬಾಬರಿ ಕಟ್ಟಡ ಧ್ವಂಸ ತೀರ್ಪು: ಮೇಲ್ಮನವಿ ಸಲ್ಲಿಸಬೇಕೆಂದ ಕಾಂಗ್ರೆಸ್

lakshmihegde

ದೇಶದ ಪ್ರತಿಯೊಬ್ಬ ನಾಗರಿಕನೂ ಸಂವಿಧಾನದಲ್ಲಿ, ಕೋಮುಸೌಹಾರ್ದದಲ್ಲಿ ನಂಬಿಕೆ ಇರಿಸಿದ್ದಾನೆ. ಈ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೇಲ್ಮನವಿ ಸಲ್ಲಿಸುತ್ತವೆ ಎಂಬುದು ಶ್ರೀಸಾಮಾನ್ಯನ ನಿರೀಕ್ಷೆಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಎಲ್ಲ ಆರೋಪಿಗಳ ಖುಲಾಸೆ ಸುಪ್ರೀಂಕೋರ್ಟ್ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್​ಬಿ) ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಮನವಿ ಸಲ್ಲಿಸಲು ನಿರ್ಧರಿಸಿದೆ.

ನ್ಯಾಯಾಧೀಶರ ಸೇವಾವಧಿ ವಿಸ್ತರಣೆ ಮಾಡಿದ್ದ ಸುಪ್ರೀಂ

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ.ಯಾದವ್ 2019ರಲ್ಲೇ ಸೇವೆಯಿಂದ ನಿವೃತ್ತರಾಗಿದ್ದರು. ಆದರೆ, ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಪ್ರಕಟವಾಗುವವರೆಗೂ ಅವರನ್ನು ಸೇವೆಯಲ್ಲಿ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು. ಯಾದವ್ ಈ ಪ್ರಕರಣವನ್ನು 2015ರಿಂದ ವಿಚಾರಣೆ ನಡೆಸುತ್ತಿದ್ದರು. ಈ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ 2017ರ ಏಪ್ರಿಲ್​ನಲ್ಲಿ ಸೂಚಿಸಿದ್ದ ಸುಪ್ರೀಂ ಕೋರ್ಟ್ 2 ವರ್ಷದಲ್ಲಿ ಇತ್ಯರ್ಥ ಪಡಿಸಿಲು ಸೂಚಿಸಿತ್ತು. ನಂತರ ನ್ಯಾಯಾಧೀಶ ಯಾದವ್ ಹೆಚ್ಚಿನ ಕಾಲಾವಕಾಶ ಕೋರಿದ್ದರು. 2020ರ ಸೆಪ್ಟೆಂಬರ್​ನಲ್ಲಿ ತೀರ್ಪು ಪ್ರಕಟಿಸುವಂತೆ ಸೂಚನೆ ನೀಡಿತು.

ಸತ್ಯದ ವಿಜಯ

ಬಾಬ್ರಿ ಕಟ್ಟಡ ಧ್ವಂಸ ಪ್ರಕರಣ ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ಇದು ಸತ್ಯದ ವಿಜಯ ಎಂದು ಬಣ್ಣಿಸಿದೆ. ತೀರ್ಪು ತಡವಾದರೂ ನ್ಯಾಯ ಗೆದ್ದಿದೆ ಎಂದು ಕೇಂದ್ರ ಸಚಿವ ರಾಜನಾಥ ಸಿಂಗ್ ಟ್ವೀಟ್ ಮಾಡಿದ್ದಾರೆ. ತೀರ್ಪನ್ನು ಸ್ವಾಗತಿಸಿರುವ ಆರೆಸ್ಸೆಸ್, ದೇಶ ಎದುರಿಸುತ್ತಿರುವ ಇನ್ನಿತರ ಸವಾಲುಗಳನ್ನು ಹಿಮ್ಮೆಟ್ಟಿಸಲು ಸಮಾಜ ಸಾಮರಸ್ಯದಿಂದ ಇರಬೇಕು ಎಂದಿದೆ.

ಯಾರೂ ಧ್ವಂಸ ಮಾಡಿಲ್ಲ!

ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ‘ನೋ ಒನ್ ಡೆಮಾಲಿಶ್ಡ ಬಾಬ್ರಿ’ (ಬಾಬ್ರಿ ಕಟ್ಟಡವನ್ನು ಯಾರೂ ಧ್ವಂಸ ಮಾಡಲಿಲ್ಲ) ಎಂಬ ಹ್ಯಾಷ್​ಟ್ಯಾಗ್ ಟ್ರೆಂಡ್ ಆಗಿದೆ. 1999ರಲ್ಲಿ ನಡೆದ ರೂಪದರ್ಶಿ ಜೆಸ್ಸಿಕಾ ಕೊಲೆ ಪ್ರಕರಣ ಆಧಾರಿತ ‘ನೋ ಒನ್ ಕಿಲ್ಡ್ ಜೆಸ್ಸಿಕಾ’ ಸಿನಿಮಾ ಹೆಸರಿನ ಮಾದರಿಯಲ್ಲಿ ಈ ಹ್ಯಾಷ್​ಟ್ಯಾಗ್ ಹರಿಯಬಿಡಲಾಗಿದೆ. ಸಿನಿಮಾ ತಾರೆಯರು, ರಾಜಕಾರಣಿಗಳು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ‘ಹಾಗಿದ್ದರೆ ಬಾಬ್ರಿ ಕಟ್ಟಡ ತಾನೆತಾನಾಗಿ ಬಿದ್ದುಹೋಯಿತೆ?’ ಎಂದು ನಟಿ ಸ್ವರ ಭಾಸ್ಕರ್ ಪ್ರಶ್ನಿಸಿದ್ದಾರೆ.

ಬಿಜೆಪಿ ಹಮ್ಮಿಕೊಂಡಿದ್ದ ಆಂದೋಲನದ ಉದ್ದೇಶ ರಾಮಮಂದಿರಕ್ಕೆ ಜನಬೆಂಬಲ ಪಡೆಯುವುದಾಗಿತ್ತು. ಈ ನಿಟ್ಟಿನಲ್ಲಿ ಜನರ ಮುಂದೆ ಸತ್ಯವನ್ನು ಇರಿಸಿ, ವಿವಾದ ಕೊನೆಗಾಣಬೇಕು ಎಂದು ಬಯಸಿದ್ದೆವು. ಈಗ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ವಣಕ್ಕೆ ನಾವೆಲ್ಲರೂ ಸಹಕರಿಸಬೇಕು.

| ಮುರಳಿ ಮನೋಹರ ಜೋಷಿ, ಬಿಜೆಪಿ ಹಿರಿಯ ನಾಯಕ

ಬಾಬ್ರಿ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ತೀರ್ಪಿನಿಂದ ವೈಯಕ್ತಿಕವಾಗಿ ಸಂತೋಷವಾಗಿದೆ. ಸತ್ಯಕ್ಕೆ ಜಯ ದೊರೆತಂತಾಗಿದೆ. ಹೋರಾಟದಲ್ಲಿ ನಾನೂ ಕೂಡ ಭಾಗಿಯಾಗಿದ್ದೆ. ಅಂದಿನ ಆಡ್ವಾಣಿಯವರ ಭಾಷಣ ಯಾರೂ ಮರೆಯುವಂತಿಲ್ಲ. ಅಂತಹ ಮಹಾನ್ ಹೋರಾಟಗಾರನ ಪರಿಶ್ರಮದ ಫಲ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ.

|ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ದುರದೃಷ್ಟಕರ. ನ್ಯಾಯಾಲಯ 2019ರ ಸುಪ್ರಿಂ ಕೋರ್ಟ್ ತೀರ್ಪು ಮತ್ತು ಸಂವಿಧಾನದ ಆಶಯಗಳನ್ನು ಗಮನಕ್ಕೆ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ. ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಬಾಬರಿ ಮಸೀದಿ ಧ್ವಂಸ ಮಾಡಿದ ಅಪರಾಧಿಗಳನ್ನು ಶಿಕ್ಷೆಗೊಳಪಡಿಸಬೇಕು.

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

ಬಾಬ್ರಿ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಸ್ವಾಗತಾರ್ಹ. ಆಡ್ವಾಣಿ ಸೇರಿ 32 ಜನರು ನಿದೋಷಿಗಳಾಗಿರುವುದು ಅಸಂಖ್ಯಾತ ಹಿಂದುಗಳ ಪರವಾಗಿ ಲಭಿಸಿದ ಕಾನೂನು ಜಯವಾಗಿದೆ. ಹಿಂದುಗಳ ಹೋರಾಟ ಯಶಸ್ವಿಯಾಗಿದೆ.

| ಡಾ.ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ, ಕೆಎಲ್​ಇ

ತೀರ್ಪು ಐತಿಹಾಸಿಕ. ‘ಸತ್ಯಕ್ಕೇ ಜಯ’ ಎಂಬ ಶ್ರೀರಾಮನ ಧ್ಯೇಯವಾಕ್ಯಕ್ಕೆ ಪೂರಕವಾಗಿದೆ ಆಡ್ವಾಣಿ, ಮುರಳಿ ಮನೋಹರ ಜೋಷಿ ಸೇರಿದಂತೆ ಅನೇಕರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ರಾಜಕೀಯ ಹುನ್ನಾರ ನಡೆದಿತ್ತು. ಈ ನ್ಯಾಯನಿರ್ಣಯದಿಂದಾಗಿ ಪಟ್ಟಭದ್ರರಿಗೆ ಮುಖಭಂಗವಾಗಿದೆ.

| ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

28 ವರ್ಷಗಳ ಬಳಿಕ ಸೆ.30ರಂದು ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪನ್ನು ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. ಈ ಪ್ರಕರಣ ಸಂಬಂಧ ಸಿಬಿಐ 351 ಸಾಕ್ಷಿಗಳು ಮತ್ತು 600 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಬಾಬ್ರಿ ಕಟ್ಟಡ ಧ್ವಂಸ ಪ್ರಕರಣ ಸಂಬಂಧ ಅನೇಕ ಪ್ರಕರಣಗಳು ಈ ಹಿಂದೆ ಉತ್ತರ ಪ್ರದೇಶದ ವಿವಿಧ ಕೋರ್ಟ್​ಗಳಲ್ಲಿ ನಡೆಯುತ್ತಿದ್ದವು. ದಶಕಗಳ ಕಾಲ ಇವುಗಳು ನನೆಗುದಿಗೆ ಬಿದ್ದಿದ್ದವು. ಇವುಗಳನ್ನು ಒಗ್ಗೂಡಿಸಿ, ತ್ವರಿತವಾಗಿ ವಿಚಾರಣೆ ನಡೆಸುವಂತೆ 2017 ಏಪ್ರಿಲ್​ನಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸಿ, ಎರಡು ವರ್ಷದಲ್ಲಿ ತೀರ್ಪು ನೀಡುವಂತೆ ವಿಶೇಷ ಕೋರ್ಟ್​ಗೆ ಷರತ್ತು ವಿಧಿಸಿತ್ತು. ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಇತ್ತೀಚೆಗೆ ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಕೂಡ ವಿಡಿಯೋ ಕಾನ್ಪರೆನ್ಸ್ ಮೂಲಕ ಆರೋಪಿಗಳ ವಿಚಾರಣೆ ನಡೆಸಲಾಗಿತ್ತು.

ಪ್ರಕರಣದಲ್ಲಿ ಒಟ್ಟು 48 ಆರೋಪಿಗಳಿದ್ದರು. ಆದರೆ, 16 ಆರೋಪಿಗಳು ಬದುಕುಳಿದಿಲ್ಲ. 32 ಆರೋಪಿಗಳು ಖುಲಾಸೆಗೊಂಡಿದ್ದಾರೆ.

1) ಲಾಲಕೃಷ್ಣ ಆಡ್ವಾಣಿ

2) ಮುರಳಿ ಮನೋಹರ ಜೋಷಿ

3) ಕಲ್ಯಾಣ್ ಸಿಂಗ್

4) ಉಮಾಭಾರತಿ

5) ವಿನಯ್ ಕಟಿಯಾರ್

6) ಸಾಧಿ್ವ ರುತಂಬರಾ

7) ಮಹಂತ ನೃತ್ಯಗೋಪಾಲ್ ದಾಸ್

8) ಡಾ.ರಾಮವಿಲಾಸ್ ವೇದಾಂತಿ

9) ಚಂಪತ್ ರಾಯ್

10) ಮಹಂತ ಧರ್ಮದಾಸ್

11) ಸತೀಶ ಪ್ರಧಾನ್

12) ಪವನಕುಮಾರ್ ಪಾಂಡೆಯ

13) ಲಲ್ಲು ಸಿಂಗ್

14) ಪ್ರಕಾಶ ಶರ್ಮಾ

15) ವಿಜಯ ಬಹಾದೂರ್ ಸಿಂಗ್

16) ಸಂತೋಷ್ ದುಬೆ

17) ಗಾಂಧಿ ಯಾದವ್

18) ರಾಮಾಜಿ ಗುಪ್ತಾ

19) ಬ್ರಜ್​ಭೂಷಣ್ ಶರಣ ಸಿಂಗ್

20) ಕಮಲೇಶ ತ್ರಿಪಾಠಿ

21) ರಾಮಚಂದ್ರ ಖತ್ರಿ

22) ಜಯ್ ಭಗವಾನ್ ಗೋಯಲ್

23) ಓಂಪ್ರಕಾಶ ಪಾಂಡೆಯ

24) ಅಮರನಾಥ ಗೊಯಲ್

25) ಜಯಭಾನ್ ಸಿಂಗ್

26) ಸಾಕ್ಷಿ ಮಹಾರಾಜ್

27) ವಿನಯಕುಮಾರ್ ರಾಯ್

28) ನವೀನ್ ಭಾಯಿ ಶುಕ್ಲಾ

29) ಆರ್.ಎನ್.ಶ್ರೀವಾಸ್ತವ್

30) ಆಚಾರ್ಯ ಧಮೇಂದ್ರ ದೇವ್

31) ಸುಧೀರಕುಮಾರ್ ಕಕ್ಕಡ

32) ಧಮೇದ್ರ ಸಿಂಹ ಗುರ್ಜರ್

ಪ್ರಮುಖ ನಾಯಕರು ನಿರಾಳ

ನಿಧನರಾಗಿರುವ ಆರೋಪಿಗಳು * ಬಾಳ್ ಠಾಕ್ರೆ * ಆಚಾರ್ಯ ಗಿರಿರಾಜ್ ಕಿಶೋರ್ * ಅಶೋಕ್ ಸಿಂಘಾಲ್ * ಮಹಂತ್ ಅವೈದ್ಯನಾಥ್ * ಪರಮಹಂಸ ರಾಮಚಂದ್ರ * ಮೋರೇಶ್ವರ ಸಾವೆ

ಲಾಲಕೃಷ್ಣ ಆಡ್ವಾಣಿ (92): ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ ತೀರ್ಪಿನಿಂದ ನಿರಾಳಗೊಂಡಿದ್ದಾರೆ. ಪ್ರಚೋದನಾಕಾರಿ ಭಾಷಣ ನೀಡಿ, ಕರಸೇವಕರನ್ನು ಪ್ರಚೋದಿಸಿದ ಆರೋಪ ಅವರ ಮೇಲಿತ್ತು. ಇತ್ತೀಚೆಗಷ್ಟೇ ನಡೆದ ಅಯೋಧ್ಯಾ ರಾಮಜನ್ಮಭೂಮಿ ಶಿಲಾನ್ಯಾಸ ಕಾರ್ಯಕ್ರಮವನ್ನು ನೇರಪ್ರಸಾರದ ಮೂಲಕ ಕಣ್ತುಂಬಿಕೊಂಡಿದ್ದ ಆಡ್ವಾಣಿ, ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ಖುಲಾಸೆ ಆಗಿರುವುದು ಬಿಜೆಪಿಗೂ ನೈತಿಕ ಬಲ ಹೆಚ್ಚಿಸಿದೆ.

ಅಯೋಧ್ಯೆ ರಾಮ ಜನ್ಮಭೂಮಿ ವಿಷಯದಲ್ಲಿ ದೇಶಾದ್ಯಂತ ರಥಯಾತ್ರೆ ಮಾಡುವ ಮುಖಾಂತರ ಬಿಜೆಪಿಯ ವರ್ಚಸ್ಸನ್ನು ಗಣನೀಯವಾಗಿ ಹೆಚ್ಚಿಸಿದವರು ಆಡ್ವಾಣಿ. ಈಗ ಬಿಜೆಪಿ ಮಾರ್ಗದರ್ಶಕ ಮಂಡಳಿಯಲ್ಲಿದ್ದಾರೆ. 1991ರಲ್ಲಿ ಬೆಳಕಿಗೆ ಬಂದ ಹವಾಲಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದಾಗ ಮನನೊಂದ ಅವರು ಆರೋಪಮುಕ್ತರಾಗುವರೆಗೂ ಪಕ್ಷದ ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣದಿಂದ ದೂರವುಳಿದಿದ್ದರು. ನಿದೋಷಿಯೆಂದು ಸಾಬೀತಾದ ಮೇಲೆ ಸಕ್ರಿಯ ರಾಜಕಾರಣಕ್ಕೆ ಮರಳಿದರು.

ಡಾ.ಮುರಳಿ ಮನೋಹರ ಜೋಷಿ (86): ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದವರು. ಬಿಜೆಪಿಯ ಹಿರಿಯ ನಾಯಕರಲ್ಲಿ ಒಬ್ಬರು. 1992 ಡಿ.6ರಂದು ಪ್ರಚೋದನಾಕಾರಿ ಭಾಷಣ ನೀಡಿ, ಕರಸೇವಕರನ್ನು ಪ್ರಚೋದಿಸಿದ ಆರೋಪ ಜೋಷಿಯವರ ಮೇಲಿತ್ತು. ಜೋಷಿ ಮೋದಿಯಿಂದ ಮುನಿಸಿಕೊಂಡಿದ್ದರೂ ಇತ್ತೀಚಿನ ದಿನಗಳಲ್ಲಿ ಅವರ ಆಪ್ತವಲಯಕ್ಕೆ ಸೇರಿಕೊಂಡಿದ್ದಾರೆ. ವಾರಾಣಸಿ, ಅಲಹಾಬಾದ್, ಕಾನಪುರ್​ನ ಸಂಸದರಾಗಿದ್ದ ಜೋಷಿ ವೃದ್ಧಾಪ್ಯದ ಕಾರಣ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ, ಪ್ರಸಕ್ತ ಬಿಜೆಪಿ ಮಾರ್ಗದರ್ಶಕ ಮಂಡಳಿಯಲ್ಲಿದ್ದಾರೆ.

ಉಮಾಭಾರತಿ (61): ಕೇಂದ್ರದಲ್ಲಿ ಜಲಸಂಪನ್ಮೂಲ ಸಚಿವೆಯಾಗಿದ್ದವರು. ಹಿಂದುತ್ವದ ಪ್ರಖರ ನಾಯಕಿಯಾಗಿಯೂ ಗುರುತಿಸಿಕೊಂಡಿರುವ ಇವರು ಮಧ್ಯಪ್ರದೇಶದ ಮುಖ್ಯಮಂತ್ರಿ ಕೂಡ ಆಗಿದ್ದರು. ಅನಾರೋಗ್ಯದ ಕಾರಣ 2019 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.

ಕಲ್ಯಾಣ್ ಸಿಂಗ್ (88): ಬಾಬ್ರಿ ಕಟ್ಟಡ ಧ್ವಂಸಗೊಂಡಾಗ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದವರು. ಘಟನೆ ಪರಿಣಾಮ 1992ರ ಡಿಸೆಂಬರ್ 6ರಂದೇ ರಾಜೀನಾಮೆ ನೀಡಿದರು. ಪೊಲೀಸರು ಮತ್ತು ಸ್ಥಳೀಯಾಡಳಿತದ ಅಧಿಕಾರಿಗಳು ಇವರ ಸೂಚನೆ ಮೇರೆಗೆ ಕರಸೇವಕರನ್ನು ವಿವಾದಿತ ಕಟ್ಟಡ ಕೆಡಹುವುದರಿಂದ ತಡೆಯಲಿಲ್ಲ ಎಂಬ ಆರೋಪ ಸಿಂಗ್ ಮೇಲಿತ್ತು. ರಾಜಸ್ಥಾನ, ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಇವರು ಸದ್ಯ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿನಯ್ ಕಟಿಯಾರ್ (65): ಆರೆಸ್ಸೆಸ್​ನ ಯುವ ಸಂಘಟನೆ ಬಜರಂಗದಳದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಇವರು ರಾಜ್ಯಸಭಾ ಸದಸ್ಯರೂ ಆಗಿದ್ದರು. ರಾಮ ಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಸಾಧ್ವಿ  ರುತಂಬರಾ(56): 1990ರ ದಶಕದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ರಾಮ ಜನ್ಮಭೂಮಿ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆದರೆ, ಕಳೆದ ಹಲವು ವರ್ಷಗಳಿಂದ ಆಧ್ಯಾತ್ಮಿಕ-ಸಾಮಾಜಿಕ ರಂಗಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದು ಅನಾಥ ಹಾಗೂ ನಿರ್ಗತಿಕರ ಪೋಷಣೆಗೆ ವಾತ್ಸಲ್ಯ ಗ್ರಾಮ ಸ್ಥಾಪಿಸಿದ್ದಾರೆ.