- ಕಾಂಗ್ರೆಸ್ಗೆ ವಿಜಯೇಂದ್ರ ತಿರುಗೇಟು
ಬೆಂಗಳೂರು: ಐದು ಗ್ಯಾರಂಟಿಗಳ ಜತೆಗೆ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ಜನರು ರೊಚ್ಚಿಗೆದ್ದು ಬಡಿಗೆ ಹಿಡಿಯುತ್ತಾರೆ. ಧಮ್ಮು, ತಾಕತ್ತು ತೋರಿಸಲಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮತ ಲಭಿಸದೆ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತೇವೆ ಎನ್ನುವುದು ಕಾಂಗ್ರೆಸ್ನ ಧೋರಣೆಯಾಗಿದೆ ಎಂದು ಟೀಕಿಸಿದ್ದಾರೆ.
ಚುನಾವಣೆಯಲ್ಲಿ ವೋಟು ಪಡೆಯುವುದಕ್ಕಾಗಿ ಐದು ಗ್ಯಾರಂಟಿಗಳ ಬಗ್ಗೆ ಮನಸೋಇಚ್ಛೆ ಭರವಸೆ ನೀಡಿದರು. ಅಧಿಕಾರಕ್ಕೆ ಬರುವುದಿಲ್ಲ ಎಂದು ತಿಳಿದು ಎಲ್ಲರಿಗೂ ಉಚಿತವಾಗಿ ಕೆಲವು ಯೋಜನೆ ನೀಡುತ್ತೇವೆ ಎಂದರು. ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳು ಈಡೇರಿಸುವುದು ಅಸಾಧ್ಯವೆಂದು ಮುಖ್ಯಮಂತ್ರಿಗಳು ಹಾಗೂ ಎಲ್ಲ ಸಚಿವರಿಗೆ ಅರ್ಥವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಹೀಗಾಗಿ ವಿಷಯಾಂತರ ಮಾಡಲು ಬಿಜೆಪಿ ಆಡಳಿತಾವಧಿಯ ಕಾಯ್ದೆಗಳನ್ನು ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿದ್ದು, ಈ ತೀರ್ಮಾನಗಳ ವಿರುದ್ಧ ಬಿಜೆಪಿ ಸದನದ ಹೊರ-ಒಳಗೆ ಪ್ರಬಲ ಹೋರಾಟ ನಡೆಸಲಿದೆ ಎಂದು ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.