ರಿಪ್ಪನ್‌ಪೇಟೆಯಲ್ಲಿ ಏರ್ಪಡಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು. ಮಂಜುಳಾ, ಆಶಾ ರವೀಂದ್ರ, ವೀಣಾ ಇತರರಿದ್ದರು. 
ನ್ಯೂಸ್

ಅಭಿವೃದ್ಧಿ ಎದುರು ಅಧಿಕಾರ ದಾಹದ ಚುನಾವಣೆ

ರಿಪ್ಪನ್‌ಪೇಟೆ: ಈ ಬಾರಿ ಅಭಿವೃದ್ಧಿ ಎದುರು ಅಧಿಕಾರ ದಾಹದ ಚುನಾವಣೆ ನಡೆಯುತ್ತಿದ್ದು ಮತದಾರರು ದೇಶದ ಹಿತದೃಷ್ಟಿ ಅವಲೋಕಿಸಿ ಮತ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಕ್ಷೇತ್ರದಾದ್ಯಂತ ರಸ್ತೆ ಅಭಿವೃದ್ಧಿ, ಮೆಡಿಕಲ್ ಕಾಲೇಜು, ಕೃಷಿ ಕಾಲೇಜು, ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ, ಆಕಾಶವಾಣಿ, ಸರ್ವಋತು ಜೋಗ ಹೀಗೆ ಹತ್ತು ಹಲವು ಕಾಮಗಾರಿಗಳಿಗೆ 20,000 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಕೊಲ್ಲೂರಿಗೆ ಹೊಸನಗರದಿಂದ ಆಡುಗೋಡಿವರೆಗೆ ತಿರುವು ರಹಿತ ರಸ್ತೆ, ಸೇತುವೆ, ಕೊಡಚಾದ್ರಿಗೆ ರೋಪ್ ಕಾರು ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಮೇಗರವಳ್ಳಿಯಿಂದ ಮಣಿಪಾಲದವರೆಗೆ ಸುರಂಗ ಮಾರ್ಗ ಕಾಮಗಾರಿಗೆ ಯೋಜನಾ ವರದಿ ನೀಡಲಾಗಿದ್ದು, ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ. ಆದರೆ ಕಾಂಗ್ರೆಸ್‌ನವರು ತಮ್ಮ ಸುದೀರ್ಘ ಆಡಳಿತದಲ್ಲಿ ಗಮನಾರ್ಹವಾದ ಯಾವುದೇ ಅಭಿವೃದ್ಧಿ ಕೈಗೊಳ್ಳದೆ ಇದೀಗ ಅಧಿಕಾರ ದಾಹದಿಂದ ಅನಗತ್ಯ ಟೀಕೆ ಮಾಡುವ ಮೂಲಕ ಪ್ರಚಾರ ಕೈಗೊಂಡಿದ್ದಾರೆ ಎಂದರು.
ಬಿಜೆಪಿ ಮಹಿಳಾ ರಾಜ್ಯಾಧ್ಯಕ್ಷೆ ಮಂಜುಳಾ ಮಾತನಾಡಿ, ರಾಜ್ಯ ಸರ್ಕಾರದ ಆಡಳಿತ ಎಲ್ಲ ಕ್ಷೇತ್ರದಲ್ಲಿಯೂ ವಿಫಲವಾಗಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರು. ಸಮಾರಂಭದಲ್ಲಿ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ, ಮಹಿಳಾ ಅಧ್ಯಕ್ಷೆ ಆಶಾ ರವೀಂದ್ರ, ಮುಖಂಡರಾದ ವೀಣಾ, ಸ್ವಾಮಿರಾವ್, ಜೆಡಿಎಸ್ ಮುಖಂಡ ಎನ್.ವರ್ತೇಶ್, ಚಾಬುಸಾಬ್, ವರದರಾಜ್, ಪದ್ಮಾ ಸುರೇಶ, ಲೀಲಾ ಶಂಕರ್, ನಾಗರತ್ನಾ, ಸರಸ್ವತಿ ಇನ್ನಿತರರಿದ್ದರು.