ನ್ಯೂಸ್

ಅನುಭವ ಮಂಟಪ ಪುನಶ್ಚೇತನಕ್ಕೆ ಬದ್ಧ; ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾನ

ಬೆಂಗಳೂರು: ಸಂಸದೀಯ ವ್ಯವಸ್ಥೆಗೆ ಮೂಲವೆಂದು ಬಣ್ಣಿಸಲಾಗುವ, 12ನೇ ಶತಮಾನದಲ್ಲಿ ಬಸವಣ್ಣ ನವರು ಸ್ಥಾಪಿಸಿದ ಅನುಭವ ಮಂಟಪ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಬದ್ಧವೆಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಾಗ್ದಾನ ಮಾಡಿದ್ದಾರೆ.

ಭಾನುವಾರ ಬೆಂಗಳೂರಿನ ಬಸವ ಸಮಿತಿ ಸಭಾಂಗಣದಲ್ಲಿ ಗ್ಲೋಬಲ್ ಬಸವ ಫೌಂಡೇಷನ್ ಏರ್ಪಡಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಸರಳ ಕಾರ್ಯಕ್ರಮದಲ್ಲಿ ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಅನುಭವ ಮಂಟಪ ಪುನಶ್ಚೇತನ ಹಾಗೂ ವಚನ ಸಾಹಿತ್ಯ ಪ್ರಸಾರ ಅಗತ್ಯವಾದ ಅನುದಾನ ಆಯವ್ಯಯದಲ್ಲಿ ಕಾದಿರಿಸ ಲಾಗಿದೆ ಎಂದರು. ಸಮಾನತೆ, ಕಾಯಕ ಹಾಗೂ ದಾಸೋಹ ಬಸವೇಶ್ವರರ ತತ್ವ, ಜನರ ಜಾಗೃತಿಗಾಗಿ ರಚಿಸಿದ ಸರಳ ಸಾಹಿತ್ಯದ ವಚನಗಳ ಸತ್ವ ಈಗಲೂ ಪ್ರಸ್ತುತ ಹಾಗೂ ಸಾರ್ವಕಾಲಿಕ ಶ್ರೇಷ್ಠವಾಗಿವೆ ಎಂದು ವರ್ಣಿಸಿದ ಬಿಎಸ್​ವೈ, ಅಣ್ಣ ಬಸವಣ್ಣನವರ ತತ್ವಾದರ್ಶಗಳಲ್ಲಿ ಒಂದಿಷ್ಟನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವ ರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿದರು.

ಶ್ರೀಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಆಶೀರ್ವಚನ ನೀಡಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು, ಬಸವಣ್ಣನವರ ಅನುಯಾಯಿಗಳು ಇದ್ದರು.

ಹಲವೆಡೆ ಆಚರಣೆ: ರಾಜ್ಯದ ಹಳ್ಳಿ, ತಾಲೂಕು, ಜಿಲ್ಲಾ ಕೇಂದ್ರಗಳು ಸೇರಿದಂತೆ ದೇಶ ಹಾಗೂ ವಿದೇಶಗಳ ಹಲವೆಡೆಯೂ ಬಸವ ಜಯಂತಿ ಆಚರಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರದೆ ಸರಳವಾಗಿಯೇ ಬಸವಣ್ಣನವರು ಸಮಾಜಕ್ಕೆ ನೀಡಿರುವ ಕೊಡುಗೆ ಸ್ಮರಿಸಿ ಗೌರವ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿ ಹಲವರು ಬಸವೇಶ್ವರರನ್ನು ನೆನೆದು ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ.

ಬಸವೇಶ್ವರರಿಗೆ ನಮನ

ಸಮಾಜ ಸುಧಾರಕ, ಮಹಾ ಮಾನವತಾವಾದಿ ಬಸವೇಶ್ವರರಿಗೆ ಪ್ರಧಾನಿ ಮೋದಿ ನಮಿಸಿದ್ದಾರೆ. ಬಸವೇಶ್ವರ ಜನ್ಮದಿವಸದ ದಿನ ಅವರು ನೀಡಿದ ಸಂದೇಶಗಳನ್ನು ಮೆಲುಕು ಹಾಕುವಂತಹ ಸುಯೋಗ ಲಭಿಸಿದೆ ಎಂದು ಮನ್ ಕಿ ಬಾತ್​ನಲ್ಲಿ ಹೇಳಿದ್ದಾರೆ. ಅಕ್ಷಯ ತೃತೀಯಕ್ಕೂ ಶುಭಾಶಯ ಕೋರಿದ್ದಾರೆ.

ಶಿರಬಾಗಿ ನಮಿಸುವೆ

ಸಾಮಾಜಿಕ ಅನಿಷ್ಟಗಳ ವಿರುದ್ಧ ದೃಢವಾಗಿ ಹೋರಾಡಿದ್ದ ಬಸವಣ್ಣನವರ ಬೋಧನೆಗಳು ಎಲ್ಲ ಗಡಿಗಳನ್ನೂ ಮೀರಿ ‘ಮಾನವೀಯತೆ ಎಲ್ಲಕ್ಕಿಂತಲೂ ಮಿಗಿಲು’ ಎಂಬ ಸಂದೇಶ ಪಸರಿಸುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ. ಮಹಾನ್ ಸಂತ, ಕವಿ ಮತ್ತು ಸಮಾಜ ಸುಧಾರಕ ಜಗಜ್ಯೋತಿ ಬಸವಣ್ಣನವರ ಜಯಂತಿಯಂದು ನಾನು ಅವರಿಗೆ ಶಿರಬಾಗಿ ನಮಿಸುತ್ತೇನೆ ಎಂದಿದ್ದಾರೆ.