ನ್ಯೂಸ್

'ಬಿ ಸ್ಮೈಲ್' ನಿರ್ದೇಶಕ ಹುದ್ದೆಗೆ ಬಿ.ಎಸ್.ಪ್ರಹ್ಲಾದ್ ನೇಮಕ

ಬೆಂಗಳೂರು: ಬಿಬಿಎಂಪಿ ಪ್ರಧಾನ ಅಭಿಯಂತರ (ಸಿಇ) ಬಿ.ಎಸ್.ಪ್ರಹ್ಲಾದ್ ಅವರನ್ನು ನೂತನವಾಗಿ ರಚಿಸಲಾಗಿರುವ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ (ಬಿ - ಸ್ಮೈಲ್) ನಿದೇರ್ಶಕ (ತಾಂತ್ರಿಕ) ಹುದ್ದೆಗೆ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇತ್ತೀಚಿಗೆ ಮಂಡನೆಯಾದ ಬಿಬಿಎಂಪಿ ಬಜೆಟ್‌ನಲ್ಲಿ ಟನಲ್ ಯೋಜನೆ, ಸ್ಕೈ ಡೆಕ್, ಎಲಿವೇಟೆಡ್ ಕಾರಿಡಾರ್ ಸಹಿತ ಪ್ರಮುಖ ಬೃಹತ್ ಪ್ರಾಜೆಕ್ಟ್‌ಗಳನ್ನು ಪ್ರತ್ಯೇಕ ನಿಗಮ ಸ್ಥಾಪಿಸಿ ಅದರ ಮುಲಕ ಕೈಗೆತ್ತಿಕೊಳ್ಳುವಂತೆ ಪ್ರಸ್ತಾಪಿಸಲಾಗಿತ್ತು. ಇದನ್ನು ಪಾಲಿಕೆಯ ಮುಖ್ಯ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದನ್ನು, ನಗರಾಭಿವೃಧ್ಧಿ ಇಲಾಖೆಯು ಅನುಮೋದನೆ ನೀಡಿತ್ತು. ಇದೀಗ ಈ ನಿಗಮದ ಪ್ರಮುಖ ಹುದ್ದೆಯಾದ ನಿರ್ದೇಶಕ (ತಾಂತ್ರಿಕ) ಹುದ್ದೆಗೆ ಪ್ರಹ್ಲಾದ್ ಅವರನ್ನು ನೇಮಕ ಮಾಡಲಾಗಿದೆ.

ಪ್ರಸ್ತುತ ಪ್ರಹ್ಲಾದ್ ಹೊಂದಿದ್ದ ಬಿಬಿಎಂಪಿ ಪ್ರಧಾನ ಅಭಿಯಂತರ ಹುದ್ದೆಗೆ ಅರ್ಹರನ್ನು ಹಂಗಾಮಿಯಾಗಿ ನಿಯೋಜಿಸುವಂತೆ ಸರ್ಕಾರವು ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಿದೆ. ಹಾಗಾಗಿ ರಸ್ತೆ ಮೂಲಸೌಕರ್ಯ ಹಾಗೂ ಬೃಹತ್ ನೀರುಗಾಲುವೆ ವಿಭಾಗಗಳಿಗೆ ಹೊಸದಾಗಿ ನೇಮಕ ಮಾಡಬೇಕಿದ್ದು, ಈ ಹುದ್ದೆ ಪಡೆಯಲು ಪಾಲಿಕೆಯಲ್ಲಿರುವ ಹಿರಿಯ ಇಂಜಿನಿಯರ್‌ಗಳು ಲಾಬಿಗೆ ಮುಂದಾಗಿದ್ದಾರೆ.