ನ್ಯೂಸ್

ನೆಹರು ಆಡಳಿತ ವಿರೋಧಿಯೇ ಅಂಬೇಡ್ಕರ್ ರಾಜೀನಾಮೆ ಕಾರಣ ಎಂದ ಬಿ.ಎಲ್.ಸಂತೋಷ್

ಬೆಂಗಳೂರು: ಸರ್ಕಾರ ಮತ್ತು ನೆಹರು ಅವರೊಂದಿಗೆ ಮೂಲಭೂತವಾಗಿ ಕಾಶ್ಮೀರ, ಹಿಂದು ಕೋಡ್ ಬಿಲ್, ಮಹಿಳೆಯರಿಗೆ ಮತದಾನ ವಿಷಯದಲ್ಲಿ ಭಿನ್ನಾಭಿಪ್ರಾಯದಿಂದ ರಾಜೀನಾಮೆ ನೀಡುತ್ತಿದ್ದೇನೆಂದು ಡಾ. ಬಿ.ಆರ್. ಅಂಬೇಡ್ಕರ್ ಸಂಸತ್ತಿನಲ್ಲಿ ಹೇಳಿದ್ದರೆಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು.

ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆಯು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ‘ಸುಶಾಸನ ದಿನ ಮತ್ತು ಅಟಲ್ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು.

ಅಂಬೇಡ್ಕರ್ ರಾಜೀನಾಮೆ ಪತ್ರವು ಇಂದು ರಾಷ್ಟ್ರಪತಿ ಭವನದಲ್ಲಿ ಸಿಗುವುದಿಲ್ಲ. ಏಕೆ ಇಲ್ಲ ಎಂಬುದಕ್ಕೆ ಕಾಂಗ್ರೆಸ್‌ನವರು ಬಹಳ ಸರಿ ‘ಇನ್ ಕನ್ವಿನೆಂಟ್ ಟ್ರೂಥ್’ ಎಂದು ಹೇಳುತ್ತಾರೆ. ಅಲ್ಲಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಜನರಿಗೆ ಗೊತ್ತಾಗದೆ ಇರುವುದಿಲ್ಲ. ಆ ಕಾಲಕ್ಕೆ ನೆಹರು ಮತ್ತು ಕಾಂಗ್ರೆಸ್ ಹಣೆಬರಹ ಏನೆಂದು ಗೊತ್ತಿತ್ತು, ಈಗ ಸುಳ್ಳು ಹೇಳುತ್ತಿರುವ ಕಾಂಗ್ರೆಸ್ ಆಗಲೂ ಸುಳ್ಳು ಹೇಳುತ್ತಿತ್ತು. ಇದೇ ಕಾರಣಕ್ಕೆ ಗಾಂಧೀಜಿ ಕಾಂಗ್ರೆಸ್ ವಿಸರ್ಜನೆಗೆ ಸೂಚಿಸಿದ್ದರು. ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೆ ಅಂಬೇಡ್ಕರ್ ರಾಜೀನಾಮೆ ನೀಡುತ್ತಿದ್ದಾರೆಂದು ಆಗಿನ ಕಾಂಗ್ರೆಸ್‌ನರು ಹೇಳಿದ್ದರು. ಇದಕ್ಕೆ ಉತ್ತರವಾಗಿ ಅಂಬೇಡ್ಕರ್, ನನ್ನ ಆರೋಗ್ಯ ಚೆನ್ನಾಗಿಯೇ ಇದೆ ಎಂದಿದ್ದರು.

ಡಾ. ಅಂಬೇಡ್ಕರ್ ಹೇಳಿರುವ ಎಲ್ಲ ಆಶಯಗಳನ್ನು ಪೂರೈಸಿರುವುದು ಕಾಂಗ್ರೆಸ್ಸೇತರ ಸರ್ಕಾರಗಳಾಗಿವೆ. ಆದರೆ, ಕಾಂಗ್ರೆಸ್ ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ಕೆಲಸ ಮಾಡಿಲ್ಲ ಎಂದರು.

ಸಾಹಿತಿ ಪ್ರೊ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ‘ಸುಶಾಸನ ಕುರಿತ ಭಿತ್ತಿಪತ್ರಗಳ ಪ್ರದರ್ಶನ’ವನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೆರವೇರಿಸಿದರು. ಶಾಸಕ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.