ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ ಮಾಹಿತಿ ಫಲಕವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅನಾವರಣಗೊಳಿಸಿದರು. ಡಾ.ವಿ.ಮಹೇಶ್, ಬನಶಂಕರಿ ರಘು, ರಾಣಿಕೃಷ್ಣ, ಶ್ಯಾಮಲಾ ಉದಯ್‌ಕುಮಾರ್, ವಿನಯ್, ಶಂಕರ್, ಮಂಜುನಾಥ್, ವೆಂಕಟೇಶ್, ಡಾ.ರವಿ, ಡಾ.ಶುಭಾ ಇತರರಿದ್ದರು. 
ನ್ಯೂಸ್

ಪಡಿತರ ಪಡೆಯಲು ತಪ್ಪದ ಪರದಾಟ

ಚನ್ನರಾಯಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ಚಾಮುಡಿಹಳ್ಳಿ ಗೇಟ್‌ನಲ್ಲಿರುವ ಆಯುಷ್ ಆಸ್ಪತ್ರೆ ಪಟ್ಟಣಕ್ಕೆ ದೂರವಿದ್ದು, ಜನರು ಚಿಕಿತ್ಸೆಗಾಗಿ ಆಲ್ಲಿಗೆ ತೆರಳಲು ತೊಂದರೆಯಿದ್ದ ಕಾರಣ ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ ವಿಭಾಗ ತೆರೆಯಲಾಗಿದೆ. ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉನ್ನತೀಕರಿಸಿದ ಆಯುಷ್ ಚಿಕಿತ್ಸಾ ವಿಭಾಗದ ಉದ್ಘಾಟನೆ ಮತ್ತು ಏಕಬಳಕೆ ಪ್ಲಾಸ್ಟಿಕ್ ಮುಕ್ತ ಆಸ್ಪತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ 800 ಹೊರರೋಗಿಗಳು ತಪಾಸಣೆಗೆ ಒಳಪಡುತ್ತಿದ್ದಾರೆ. ಇದೀಗ ತೆರೆಯಲಾಗಿರುವ ಆಯುಷ್ ವಿಭಾಗದಿಂದ ಪ್ರತಿದಿನ 100 ಜನ ಚಿಕಿತ್ಸೆ, ಔಷಧ ಪಡೆದುಕೊಳ್ಳಲು ಅನುಕೂಲವಾಗಬೇಕು. ಮುಂದಿನ ದಿನಗಳಲ್ಲಿ ಹಂತ, ಹಂತವಾಗಿ ಥೆರಪಿಗಳನ್ನು ಆರಂಭಿಸಲಾಗುವುದು. ಸಾರ್ವಜನಿಕ ಆಸ್ಪತ್ರೆಯಲ್ಲಿ ಹಂತ, ಹಂತವಾಗಿ ವಾರ್ಡ್‌ಗಳ ನಿರ್ಮಾಣಕ್ಕೆ ಆದ್ಯತೆ, ಮೀಟಿಂಗ್ ಹಾಲ್, ಟಿಎಚ್‌ಒ ಕಚೇರಿಗೆ ಅವಕಾಶ ಮಾಡಿಕೊಡಲಾಗಿದೆ. ಆಸ್ಪತ್ರೆ ಸಂಗ್ರಹಿಸಿರುವ 3 ಕೋಟಿ ರೂ.ನಲ್ಲಿ ಆಸ್ಪತ್ರೆಗಾಗಿ ಅಗತ್ಯ ಪರಿಕರಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಇದರೊಂದಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಪ್ಲಾಸ್ಟಿಕ್‌ಮುಕ್ತ ವಲಯವನ್ನಾಗಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮದ ಕುರಿತು ಎಚ್ಚರಿಸುವ ನಾಮಫಲಕವನ್ನು ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳ ಇದನ್ನು ಪಾಲಿಸಬೇಕು ಎಂದರು.

ಇನ್ನೂ ರೋಗಿಗಳ ಅನುಕೂಲಕ್ಕಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಹಿರಿಸಾವೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಆಂಬುಲೇನ್ಸ್ ಸೇವೆ ಆರಂಭಿಸಲಾಗಿದೆ. ಇದರ ಸದುಪಯೋಗಕ್ಕೆ ಮುಂದಾಗಬೇಕು ಎಂದರು.

ಆಸ್ಪತ್ರೆಯಲ್ಲಿ ಇರುವ ಸೌಲಭ್ಯಗಳ ಕುರಿತಾಗಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿ.ಮಹೇಶ್ ತಿಳಿಸಿದರು. ಪುರಸಭೆ ಅಧ್ಯಕ್ಷೆ ಬನಶಂಕರಿ ರಘು, ಉಪಾಧ್ಯಕ್ಷೆ ರಾಣಿಕೃಷ್ಣ, ಆರೋಗ್ಯ ರಕ್ಷಾಸಮಿತಿ ಸದಸ್ಯರಾದ ಶ್ಯಾಮಲಾ ಉದಯ್‌ಕುಮಾರ್, ವಿನಯ್, ಶಂಕರ್, ಮಂಜುನಾಥ್, ವೆಂಕಟೇಶ್, ಆಯುಷ್ ವೈದ್ಯರಾದ ಡಾ.ರವಿ. ಡಾ.ಶುಭಾ ಇತರರು ಇದ್ದರು.