ಆಲೂರುಸಿದ್ದಾಪುರದಲ್ಲಿ ಏರ್ಪಡಿಸಿದ್ದ ಆಯುಷ್ ಆರೋಗ್ಯ ಶಿಬಿರ. 
ನ್ಯೂಸ್

ಆಲೂರು ಸಿದ್ದಾಪುರದಲ್ಲಿ ಆಯುಷ್ ಆರೋಗ್ಯ ಶಿಬಿರ

ಶನಿವಾರಸಂತೆ : ಜಿಲ್ಲಾ ಆಯುಷ್ ಇಲಾಖೆ, ಸೋಮವಾರಪೇಟೆ ಆಯುಷ್ ಆಸ್ಪತ್ರೆ ಮತ್ತು ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶನಿವಾರ ಆಲೂರು ಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಆಯುಷ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ಶಿಬಿರವನ್ನು ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಉದ್ಘಾಟಿಸಿ ಶುಭ ಹಾರೈಸಿದರು. ಸೋಮವಾರಪೇಟೆ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ವೇತಾ ಮಾತನಾಡಿ, ಸರ್ಕಾರ ಮತ್ತು ಆಯುಷ್ ಇಲಾಖೆ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಆಯುಷ್ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದು, ಶಿಬಿರದಲ್ಲಿ ಆಯುಷ್ ಪದ್ಧತಿಯಂತೆ ರೋಗಿಗಳನ್ನು ಪರೀಕ್ಷಿಸಲಾಗುತ್ತಿದೆ. ಉಚಿತವಾಗಿ ಔಷಧ, ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದರು.

ತಾಲೂಕು ಕೇಂದ್ರದ ಆಯುಷ್ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಕಾಯಿಲೆಗಳಿಗೆ ಆಯುಷ್ ಪದ್ಧತಿಯಂತೆ ಚಿಕಿತ್ಸೆ ನೀಡಲಾಗುತ್ತದೆ. ಮಾನಸಿಕ ವೃದ್ಧಿಗಾಗಿ ಯೋಗ ಹೇಳಿಕೊಡಲಾಗುತ್ತದೆ. ರೋಗಿಗಳಿಗೆ ಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ರೋಗಿಗಳು ಸೋಮವಾರಪೇಟೆ ತಾಲೂಕು ಆಯುಷ್ ಆಸ್ಪತ್ರೆಗೆ ಬಂದು ವೈದ್ಯರಿಂದ ಚಿಕಿತ್ಸೆ ಸೇರಿದಂತೆ ಇನ್ನಿತರ ಸೇವೆಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಆರೋಗ್ಯ ಶಿಬಿರದಲ್ಲಿ ಗ್ರಾಪಂ ಸದಸ್ಯೆ ದಮಯಂತಿ ಕರುಂಬಯ್ಯ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಹರೀಶ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ.ಸೌಪರ್ಣಿಕಾ, ಸಿಬ್ಬಂದಿ ರಾಜ್‌ಕುಮಾರ್, ಅಶೋಕ್, ರೂಪಾ, ಜ್ಯೋತಿ ಪಾಲ್ಗೊಂಡಿದ್ದರು.