ನೆಲಮಂಗಲ: ಜಗತ್ತಿನಲ್ಲಿ ಕರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಮಾರುಕಟ್ಟೆಗೆ ತರಹೇವಾರಿ ಮಾಸ್ಕ್ಗಳು ಲಗ್ಗೆ ಇಟ್ಟಿವೆ. ಕಾಸಿಗೆ ತಕ್ಕಂತೆ ಕಜ್ಜಾಯ ಎಂಬಂತೆ ತ್ರೀ ಫೋಲ್ಡೆಡ್, ಎನ್-95 ಮಾಸ್ಕ್ಗಳ ಜತೆಗೆ ಮ್ಯಾಚಿಂಗ್ ಮಾಸ್ಕ್ಗಳು, ಚಿನ್ನದ ಮಾಸ್ಕ್, ಮೋದಿ ಭಾವಚಿತ್ರವುಳ್ಳ ಮಾಸ್ಕ್, ತೆಂಗಿನ ಕರಟದ(ಚಿಪ್ಪಿನ) ಮಾಸ್ಕ್ಗಳೂ ಸದ್ದು ಮಾಡಿವೆ. ಇದೀಗ ಆಯುರ್ವೇದ ಔಷಧ ಗುಣ ಅಳವಡಿಸಿರುವ ಮಾಸ್ಕ್ ಬರಲಿದೆ!
ಗಿಡಮೂಲಿಕೆ ಬಳಸಿಕೊಂಡೇ ಮಾಸ್ಕ್ ತಯಾರಿಸಲು ವಸಭಾರತ ಚಾರಿಟಬಲ್ ಟ್ರಸ್ಟ್ ಮುಂದಾಗಿದೆ. ಆಯರ್ವೇದದಲ್ಲಿ ತಿಳಿಸಿರುವಂತೆ ಔಷಧದ ಗಿಡಮೂಲಿಕೆಯ ಪೌಡರ್ ಅನ್ನು ವಿಶೇಷ ಬಟ್ಟೆಯಲ್ಲಿ ಪ್ಯಾಕ್ ಮಾಡಿ ಮೂಗಿನ ಭಾಗದ ಮಾಸ್ಕ್ ಜಾಗದಲ್ಲಿ ಇರಿಸಲಾಗುವುದು. ಈ ಮಾಸ್ಕ್ ಧರಿಸಿಕೊಂಡು ಉಸಿರಾಡಿದಾಗ ದೇಹದಲ್ಲಿನ ಶೀತ, ಕೆಮ್ಮು, ಕಫದಂತಹ ಕಾಯಿಲೆ ದೂರವಾಗುವ ಜತೆಗೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೆಯೇ ಪೌಡರ್ ಮುಗಿದ ಬಳಿಕ ಮಾಸ್ಕ್ ಸ್ವಚ್ಛಗೊಳಿಸಿ ಅದರೊಳಗೆ ಪುನಃ ಪೌಡರ್ ಪೊಟ್ಟಣ ಇಟ್ಟುಕೊಂಡು ಮರುಬಳಕೆ ಮಾಡಬಹುದು.
ಇದನ್ನೂ ಓದಿರಿ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾಗೆ ಕರೊನಾ ಪಾಸಿಟಿವ್
ಕೇರಳ ಹಾಗೂ ಕರ್ನಾಟಕದ ಕೆಲ ಆಯುರ್ವೇದ ವೈದ್ಯರ ಸಲಹೆ ಮೇರೆಗೆ ವಿಶಿಷ್ಟ ರೀತಿಯ ಮಾಸ್ಕ್ ತಯಾರಿ ಕಾರ್ಯಕ್ಕೆ ಕೈಹಾಕಿದ್ದೇವೆ. 1 ಲಕ್ಷ ಮಾಸ್ಕ್ ತಯಾರಿಸುವ ಗುರಿ ಇದೆ. 3 ಮಾದರಿಯ ಮಾಸ್ಕ್ ತಯಾರಿಸಲಾಗುತ್ತದೆ. ಸದ್ಯಕ್ಕೆ 10 ಸಾವಿರ ಮಾಸ್ಕ್ ತಯಾರಿಕೆಗೆ ಬಟ್ಟೆ ಹಾಗೂ ಆಯುರ್ವೇದ ಔಷಧ ಇಡಲು ಬೇಕಾದ ವಿಶೇಷ ರೀತಿಯ ಬಟ್ಟೆಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ವಿನೋದ್ಕುಮಾರ್ ಮಾಹಿತಿ ನೀಡಿದ್ದಾರೆ.
ನಗರದ ಭೈರವೇಶ್ವರ ಬಡಾವಣೆಯ ಶ್ರೀವೆಂಕಟರಮಣ ದೇವಾಲಯದಲ್ಲಿ ಮಾಸ್ಕ್ ತಯಾರಿ ಕಾರ್ಯಕ್ಕೆ ನಗರಸಭೆ ಸದಸ್ಯ ಎನ್.ಗಣೇಶ್ ಬುಧವಾರ ಚಾಲನೆ ನೀಡಿದರು.