ಲಖನೌ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಮಾಡಲು ಉತ್ತರಪ್ರದೇಶ ಸರ್ಕಾರವು ನೀಡುವ ಐದು ಎಕರೆ ಭೂಮಿಯನ್ನು ಪಡೆಯಲು ಒಪ್ಪಿದೆ. ಅಲ್ಲದೆ ಆ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಟ್ರಸ್ಟ್ ರಚನೆಗೆ ತೀರ್ಮಾನಿಸಿದೆ.
ಈ ಬಗ್ಗೆ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ ಝುಫರ್ ಫಾರುಖಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಟ್ರಸ್ಟ್ ಮಸೀದಿ ನಿರ್ಮಾಣದ ಜತೆಗೆ ಅ ಪ್ರದೇಶದಲ್ಲಿ ಚಾರಿಟಬಲ್ ಆಸ್ಪತ್ರೆ, ಸಾರ್ವಜನಿಕ ಗ್ರಂಥಾಲಯ ಮತ್ತು ಇಂಡೋ ಇಸ್ಲಾಮಿಕ್ ನಾಗರಿಕತೆ ಪರಿಚಯಿಸುವ ಕೇಂದ್ರವನ್ನು ನಿರ್ಮಾಣ ಮಾಡಲಾಗುವುದು ಎಂದು ಮಂಡಳಿ ತಿಳಿಸಿದೆ.
ಇದರ ಜತೆಗೆ ಅಲ್ಲಿ ಇಂಡೋ ಇಸ್ಲಾಮಿಕ್ ನಾಗರಿಕತೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು. ಶೀಘ್ರದಲ್ಲೇ ಟ್ರಸ್ಟ್ ಸದಸ್ಯರನ್ನು ಘೋಷಣೆ ಮಾಡಲಾಗುವುದು ಎಂದು ವಕ್ಫ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ನವೆಂಬರ್ 9 ರಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿದ್ದ ನಿರ್ದೇಶನದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ರಚನೆಗೆ ಸೂಚಿಸಿತ್ತು. ಜತೆಗೆ ಮಸೀದಿ ನಿರ್ಮಾಣಕ್ಕೆ ಪರ್ಯಾಯವಾಗಿ 5 ಎಕರೆ ಜಮೀನು ನೀಡಲು ಸೂಚಿಸಿ, ಅದನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸಬೇಕು, ಅಲ್ಲಿ ಮಸೀದಿ ನಿರ್ಮಿಸಲಿ ಎಂದಿತ್ತು. (ಏಜೆನ್ಸೀಸ್)