ನ್ಯೂಸ್

ದೇವಲೋಕದಂತೆಯೇ ಇದೆ ಅಯೋಧ್ಯೆಯ ಭವ್ಯವಾದ ರಾಮಮಂದಿರ

Webdesk - Ashwini HR

ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಭವ್ಯವಾದ ದೇವಾಲಯವು ಅದ್ಭುತವಾಗಿದೆ. ಪ್ರಪಂಚದಾದ್ಯಂತ ಇರುವ ಕೋಟ್ಯಾಂತರ ರಾಮಭಕ್ತರು ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ದೇಗುಲದ ಉದ್ಘಾಟನೆಗೆ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಗರ್ಭಗುಡಿಯಿಂದ ನೆಲಮಹಡಿಯವರೆಗೆ ಬಹುತೇಕ ಸಿದ್ಧಗೊಂಡಿದೆ.

ಜನವರಿ 22 ರಂದು ಆಯೋಜಿಸಲಾಗುವ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನಂತರ ದೇವಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾಲಕಾಲಕ್ಕೆ ದೇವಾಲಯದ ಛಾಯಾಚಿತ್ರಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ ಟ್ರಸ್ಟ್‌ನಿಂದ ಹೊಸದಾಗಿ ಬಿಡುಗಡೆಯಾದ ಛಾಯಾಚಿತ್ರಗಳು ರಾತ್ರಿಯಲ್ಲಿ ದೇವಾಲಯವು ಎಷ್ಟು ಭವ್ಯವಾಗಿ ಕಾಣುತ್ತದೆ ಎಂಬುದನ್ನು ತೋರಿಸಿದ್ದು, ಇದರ ಸೌಂದರ್ಯ ಒಮ್ಮೆ ನೀವು ನೋಡಲೇಬೇಕು.

ಅಂದಹಾಗೆ ದೇವಾಲಯದ ನಾಲ್ಕು ಹೊಸ ಫೋಟೋಗಳನ್ನು ಟ್ರಸ್ಟ್ ಬಿಡುಗಡೆ ಮಾಡಿದೆ...ಮೊದಲನೆಯ ಫೋಟೋದಲ್ಲಿ ದೇವಾಲಯದ ಒಳಗಿನ ನೋಟವು ಆಕರ್ಷಕವಾಗಿದೆ. ಭಕ್ತರ ಕಲ್ಪನೆಯಂತೆ ದೇವಾಲಯವು ದೈವಿಕ ಮತ್ತು ಭವ್ಯವಾಗಿರುತ್ತದೆ ಎಂದು ತೋರುತ್ತದೆ. ಎರಡನೆಯ ಫೋಟೋದಲ್ಲಿ ರಾಮಮಂದಿರದ ರಾತ್ರಿಯ ನೋಟ, ಮೂರನೆಯ ಫೋಟೋದಲ್ಲಿ ದೇವಾಲಯದ ಒಳಗಿನ ಭವ್ಯವಾದ ಕೆತ್ತನೆಗಳು, ನಾಲ್ಕನೆಯ ಫೋಟೋದಲ್ಲಿ ದೇವಾಲಯ ಸಂಕೀರ್ಣದ ನೋಟ ಹಾಗೂ ಸಂಕೀರ್ಣದಲ್ಲಿನ ಆಕರ್ಷಕ ಶಿಲ್ಪಗಳನ್ನು ಕಣ್ತುಂಬಿಕೊಳ್ಳಬಹುದು.

ಸದ್ಯ ರಾಮಲಲ್ಲಾ ಅಯೋಧ್ಯೆಯ ತಾತ್ಕಾಲಿಕ ದೇವಾಲಯದಲ್ಲಿ ಕುಳಿತಿದ್ದಾರೆ. ಜನವರಿ 22 ರಂದು ಹೊಸ ದೇವಸ್ಥಾನದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನಡೆಯಲಿದೆ.