ಲಖನೌ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ, ಶಿಲಾನ್ಯಾಸ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿರುವ ಈ ಸಂದರ್ಭದಲ್ಲಿ ಅಯೋಧ್ಯೆಯ ರೈಲ್ವೆ ನಿಲ್ದಾಣದ ಉನ್ನತೀಕರಣದ ಯೋಜನೆಯೂ ಸಿದ್ಧವಾಗಿದೆ. ಆರಂಭಿಕವಾಗಿ ಈ ಉನ್ನತೀಕರಣ ಯೋಜನೆಗೆ ಉತ್ತರ ಪ್ರದೇಶ ಸರ್ಕಾರ 80 ಕೋಟಿ ರೂಪಾಯಿ ಮೀಸಲಿಟ್ಟಿತ್ತು. ಅದೀಗ ಪರಿಷ್ಕರಣೆಗೊಂಡು 104 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ರಾಮ ಮಂದಿರ ಮಾದರಿಯಲ್ಲೇ ನಿರ್ಮಾಣವಾಗಲಿದೆ ಹೊಸ ರೈಲ್ವೆ ನಿಲ್ದಾಣ. ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಪ್ರಧಾನ ಮಂತ್ರಿ ನರೇಂದ್ರಮೋದಿಯವರ ನೇತೃತ್ವದಲ್ಲಿ ರೈಲ್ವೆ ಇಲಾಖೆ ಅಯೋಧ್ಯೆ ರೈಲ್ವೆ ನಿಲ್ದಾಣದ ಉನ್ನತೀಕರಣ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದ್ದು, ಅದರ ಜತೆಗೆ ಪ್ರಸ್ತಾವಿತ ಮಾದರಿಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಪ್ರಸ್ತಾವಿತ ರೈಲ್ವೆ ನಿಲ್ದಾಣದ ಮಾದರಿಯನ್ನು ಆರ್ಐಟಿಇಎಸ್ ಲಿಮಿಟೆಡ್ ಮರುಅಭಿವೃದ್ಧಿಗೊಳಿಸಲಿದ್ದು, ಎರಡು ಹಂತದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮೊದಲ ಹಂತ 2021ರ ಜೂನ್ ತಿಂಗಳಲ್ಲಿ ಮುಗಿಯಲಿದೆ. ಇದರಲ್ಲಿ, ಮಾಡರ್ನ್ ಆರ್ಟ್ ಗ್ಯಾಲರಿ, ಪುರುಷ, ಮಹಿಳೆಯರಿಗೆ ಪ್ರತ್ಯೇಕ ಡೋರ್ಮೆಟ್ರಿಗಳು, ಹೆಚ್ಚಿನ ಸಂಖ್ಯೆಯ ಟಿಕೆಟ್ ಕೌಂಟರ್ಗಳು, ಫುಡ್ ಪ್ಲಾಜಾ, ಮೇಲ್ಸೇತುವೆ, ಪ್ರವಾಸಿ ಕೇಂದ್ರ, ಟ್ಯಾಕ್ಸಿ ಬೂತ್, ವಿಐಪಿ ಲಾಂಜ್, ಅತಿಥಿ ಗೃಹ, ಆಡಿಟೋರಿಯಂಗಳು ಇರಲಿವೆ. (ಏಜೆನ್ಸೀಸ್)