ನ್ಯೂಸ್

ಅಯೋಧ್ಯೆಗೆ ಸೇರಬೇಕಿದ್ದ ಶ್ರೀರಾಮ, ಸೀತೆ, ಲಕ್ಷ್ಮಣರ ಪಂಚಲೋಹದ ವಿಗ್ರಹಗಳು ಬೆಳ್ತಂಗಡಿಯ ಕಣಿಯೂರಿನಲ್ಲಿ ಪ್ರತಿಷ್ಠಾಪನೆ

ಅಯೋಧ್ಯೆಗೆ ಸೇರಬೇಕಿದ್ದ ಶ್ರೀರಾಮ, ಸೀತೆ, ಲಕ್ಷ್ಮಣರ ಪಂಚಲೋಹದ ವಿಗ್ರಹ ಬೆಳ್ತಂಗಡಿ ತಾಲೂಕಿನ ಕಣಿಯೂರಿನಲ್ಲಿ 19 ವರ್ಷದ ಹಿಂದೆಯೇ ಪ್ರತಿಷ್ಠಾಪನೆಗೊಂಡಿದೆ. ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ಐತಿಹಾಸಿಕ ದಿನ ಇಂದು(ಆ.5). ಈ ಸುಸಂದರ್ಭದಲ್ಲಿ ಕಣಿಯೂರಿನಲ್ಲಿರುವ ಸೀತಾರಾಮ ಲಕ್ಷ್ಮಣರ ವಿಗ್ರಹಗಳ ಹಿನ್ನೆಲೆ ಕುರಿತ ಮಾಹಿತಿ ಇಲ್ಲಿದೆ.

ಅದು 1989ರ ಕಾಲ. ಶ್ರೀರಾಮ ಜನ್ಮಸ್ಥಳ ಅಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಿಸಲು ಸಮಸ್ತ ಹಿಂದೂಗಳನ್ನು ಎಚ್ಚರಿಸುವ ಕಾಯಕದಲ್ಲಿ ನಿರಂತರ ಯೋಜನೆ ರೂಪಿಸುತ್ತಿದ್ದ ಕಾಲ. ಇದೇ ಕಾಲಘಟ್ಟದಲ್ಲಿ ಕರಸೇವಕರೊಂದಿಗೆ ಅಯೋಧ್ಯೆಗೆ ತೆರಳಿದ್ದ ಪಂಚಲೋಹದ ಶ್ರೀರಾಮ, ಸೀತೆ, ಲಕ್ಷ್ಮಣ ವಿಗ್ರಹ ಮತ್ತೆ ಬೆಳ್ತಂಗಡಿ ತಾಲೂಕಿನ ಕಣಿಯೂರಿನಲ್ಲಿ ಪ್ರತಿಷ್ಠಾಪನೆಗೊಂಡಿದೆ. ಅಯೋಧ್ಯೆಗೆ ಗ್ರಾಮ ಗ್ರಾಮಗಳಿಂದ ಇಟ್ಟಿಗೆ ಸಮರ್ಪಿಸುವ ಅಭಿಯಾನದ ರಥ 1989ರಲ್ಲಿ ಕರಾವಳಿಯಿಂದ ತೆರಳಿತ್ತು. ಶ್ರೀಕ್ಷೇತ್ರ ಧರ್ಮಸ್ಥಳದಿಂದ ಹೊರಟ ಈ ರಥದ ಮುನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ನೀಡಿದ ಪಂಚಲೋಹದ ಶ್ರೀರಾಮ, ಸೀತೆ, ಲಕ್ಷ್ಮಣ ವಿಗ್ರಹವನ್ನೂ ಇಟ್ಟು ಅಯೋಧ್ಯೆಗೆ ಕಳುಹಿಸಲಾಗಿತ್ತು. ಆದರೆ, ಅಯೋಧ್ಯೆಯಲ್ಲಿ ಇಟ್ಟಿಗೆ ಸಮರ್ಪಣೆಗೆ ಮಾತ್ರ ಅವಕಾಶವಿತ್ತು. ಹಾಗಾಗಿ ಅದೇ ರಥದಲ್ಲಿ ಈ ಪಂಚಲೋಹದ ವಿಗ್ರಹವನ್ನು ವಾಪಸ್​ ತರಲಾಗಿತ್ತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗೆಡೆ ಅವರ ನಿರ್ದೇಶನದಂತೆ ಅಂದು ರಾಮಶಿಲಾ ಪೂಜನ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಅಯೋಧ್ಯೆಗೆ ತೆರಳಿ ಬಂದಿದ್ದ ಶ್ರೀರಾಮ, ಸೀತೆ, ಲಕ್ಷ್ಮಣರ ಪಂಚಲೋಹದ ವಿಗ್ರಹವನ್ನು ಗುರುವಾಯನಕೆರೆಯ ಹಿಂದು ಏಕತಾ ಕೇಂದ್ರದಲ್ಲಿಟ್ಟು (ಪ್ರತಿಷ್ಠಾಪನೆ ರಹಿತ) ಪೂಜೆ ನಡೆಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಜಿಲ್ಲೆಯ ಯಾವುದಾದರೊಂದು ಪ್ರದೇಶದಲ್ಲಿ ನೂತನ ಭಜನಾ ಮಂದಿರ ನಿರ್ಮಿಸಿದರೆ ಅಲ್ಲಿ ಈ ವಿಗ್ರಹ ಪ್ರತಿಷ್ಠಾಪಿಸಲು ಸಮಿತಿ ನಿರ್ಧರಿಸಿತ್ತು.

1989ರಲ್ಲಿ ಕರಾವಳಿಯಿಂದ ತೆರಳಿದ ರಥದಲ್ಲಿ ವಿಎಚ್‌ಪಿ ಯುವ ಮುಖಂಡನಾಗಿ ಕಣಿಯೂರಿನ ನಿವಾಸಿ ಸುಬ್ರಹ್ಮಣ್ಯ ಮುಚ್ಚಿನ್ನಾಯ ಇದ್ದರು. ಕಣಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಮುಖ ವೈದಿಕ ಕಾರ್ಯದಲ್ಲಿ ಅವರ ಕುಟುಂಬ ತೊಡಗಿಸಿಕೊಂಡಿತ್ತು. ಅಲ್ಲದೆ ಗ್ರಾಮ ಮಟ್ಟದಲ್ಲೇ ಅಯೋಧ್ಯಾ ಹೋರಾಟವನ್ನು ಬಲಪಡಿಸುವ ಉದ್ದೇಶದಿಂದ 1991ರಲ್ಲಿ ಕಣಿಯೂರು ಕಸಬ ಎಂಬಲ್ಲಿ ಭಜನಾ ಮಂದಿರ ನಿರ್ಮಿಸಿದರು. ವಿಎಚ್‌ಪಿ ಮುಖಂಡ ಡಾ. ಗಂಗಾಧರ ಶೇಖರ ಅವರು ಈ ಭಜನಾ ವಿಗ್ರಹ ಕೊಡುವಂತೆ ಗುರುವಾಯನಕೆರೆಯ ಹಿಂದು ಏಕತಾ ಕೇಂದ್ರಕ್ಕೆ ಮನವಿ ಮಾಡಿದರು. ವಿಗ್ರಹವನ್ನು ಹಸ್ತಾಂತರಿಸಿದ ಬಳಿಕ ಕಣಿಯೂರಿನ ಭಜನಾ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಪುರೋಹಿತರೂ, ವಿಎಚ್‌ಪಿ ಹಿರಿಯ ಮುಖಂಡ, ಕರಸೇವೆ ಸಂದರ್ಭ ಅಯೋಧ್ಯೆಗೆ ತೆರಳಿದ ಕರಸೇವಕ ಸುಬ್ರಹ್ಮಣ್ಯ ಮುಚ್ಚಿನ್ನಾಯ ತಿಳಿಸಿದ್ದಾರೆ.