ಬೆಂಗಳೂರು: ಭಾರತದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್, ಗೋಸ್ಪೋರ್ಟ್ಸ್ ಫೌಂಡೇಶನ್ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ. ಇದರ ಭಾಗವಾಗಿ ಬೆಂಗಳೂರಿನಲ್ಲಿ ಕ್ರೀಡಾ ವಿಜ್ಞಾನದ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಭಾರತೀಯ ಕ್ರೀಡಾ ರಂಗದ ದೀರ್ಘಾವಧಿಯ ಬೆಳವಣಿಗೆಗೆ ಪೂರಕವಾದ ಸಂಶೋಧನೆ ಮತ್ತು ಆವಿಷ್ಕಾರ ವಿಭಾಗಗಳನ್ನು ಉತ್ತೇಜಿಸುವ ಉದ್ದೇಶದಿಂದ, ದೇಶದಲ್ಲೇ ಮೊದಲ ಬಾರಿಗೆ ಆಕ್ಸಿಸ್ ಬ್ಯಾಂಕ್- ಗೋಸ್ಪೋರ್ಟ್ಸ್ ಫೌಂಡೇಶನ್ ದಿ ಪರ್ಫಾರ್ಮೆನ್ಸ್ ಇನ್ ಸ್ಟಿಟ್ಯೂಟ್ (ಎಜಿಟಿಪಿಐ) ಅನ್ನು ಪ್ರಾರಂಭಿಸಲಾಗುತ್ತಿದೆ.
ಈ ಅತ್ಯಾಧುನಿಕ ಸಂಸ್ಥೆಯನ್ನು ಬೆಂಗಳೂರಿನ ಪ್ರಸಿದ್ಧ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ (ಸಿಎಸ್ಇ) ಆವರಣದಲ್ಲಿ ಸ್ಥಾಪಿಸಲಾಗುವುದು. ಕ್ರೀಡಾಪಟುಗಳ ಪ್ರದರ್ಶನ ಮೌಲ್ಯಮಾಪನ, ಉದಯೋನ್ಮುಖ ಕ್ರೀಡಾ ಪ್ರತಿಭೆಗಳ ಗುರುತಿಸುವಿಕೆ, ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ಪ್ರಮುಖವಾಗಿ ಭಾರತೀಯ ಕ್ರೀಡಾಪಟುಗಳನ್ನು ಕೇಂದ್ರೀಕರಿಸಿ ವಿಶ್ಲೇಷಣೆ ಮತ್ತು ಸಂಶೋಧನೆಗಳನ್ನು ನಡೆಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ಸಂಸ್ಥೆಯ ಸ್ಥಾಪಕ ಪಾಲುದಾರರಾಗಿರುವ ಆಕ್ಸಿಸ್ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯನ್ನು ಈ ಇನ್ ಸ್ಟಿಟ್ಯೂಟ್‌ನ ಸ್ಥಾಪನೆ ಮತ್ತು ಪ್ರಗತಿಗಾಗಿ ವಿನಿಯೋಗಿಸಲಿದೆ. ಗೋಸ್ಪೋರ್ಟ್ಸ್ ಫೌಂಡೇಶನ್ ಇದರ ಆಡಳಿತ, ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಕಾರ್ಯತಂತ್ರದ ಪಾಲುದಾರಿಕೆಗಳ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದೆ.
ಈ ಎಜಿಟಿಪಿಐ ಸಂಸ್ಥೆಯನ್ನು ಮುಖ್ಯವಾಗಿ ಜನಸಂಪನ್ಮೂಲ, ವಿಶ್ಲೇಷಣೆ ಮತ್ತು ಸಂಶೋಧನೆ ಎಂಬ ಮೂರು ಪ್ರಮುಖ ಸ್ತಂಭಗಳ ಆಧಾರದ ಮೇಲೆ ನಿರ್ಮಿಸಲಾಗುವುದು.
ಇದರಲ್ಲಿ ಮೊದಲನೆಯದಾದ ಜನಸಂಪನ್ಮೂಲ ಸ್ತಂಭವು ತರಬೇತಿ ಕಾರ್ಯಕ್ರಮಗಳು, ಫೆಲೋಶಿಪ್ ಗಳು, ಮಾರ್ಗದರ್ಶನ ಮತ್ತು ವೃತ್ತಿಪರ ಅಭಿವೃದ್ಧಿಯ ಅವಕಾಶಗಳ ಮೂಲಕ ಭಾರತದ ಕ್ರೀಡಾ ವಿಜ್ಞಾನ ಮತ್ತು ಪ್ರದರ್ಶನ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಿದೆ. ಈ ಯೋಜನೆಯು ವಿವಿಧ ಕ್ರೀಡಾ ಒಕ್ಕೂಟಗಳು, ಅಕಾಡೆಮಿಗಳು ಮತ್ತು ಹೈ- ಪರ್ಫಾರ್ಮೆನ್ಸ್ ಕೇಂದ್ರಗಳಲ್ಲಿ ಅರ್ಹ ಹಾಗೂ ನುರಿತ ತಜ್ಞರ ಬಲಿಷ್ಠ ಪಡೆಯನ್ನು ನಿರ್ಮಿಸಲು ನೆರವಾಗಲಿದೆ.
ಇನ್ನು ಎರಡನೆಯದಾದ ವಿಶ್ಲೇಷಣೆ ಸ್ತಂಭದಡಿಯಲ್ಲಿ ಕ್ರೀಡಾಪಟುಗಳ ಸಾಮರ್ಥ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಕೇಂದ್ರವನ್ನು ಸ್ಥಾಪಿಸಲಾಗುವುದು. ಇದು ಕ್ರೀಡಾಪಟುಗಳ ಪ್ರದರ್ಶನ ಸಾಮರ್ಥ್ಯದ ಪರೀಕ್ಷೆ, ಬಯೋಮೆಕಾನಿಕ್ಸ್ ಅನಾಲಿಟಿಕ್ಸ್, ದೈಹಿಕ ಚೇತರಿಕೆಯ ಮೌಲ್ಯಮಾಪನ, ಗಾಯದ ಅಪಾಯದ ಮೌಲ್ಯಮಾಪನ ಮತ್ತು ದತ್ತಾಂಶ ಆಧಾರಿತ ಪ್ರದರ್ಶನ ಯೋಜನೆಗಳನ್ನು ರೂಪಿಸಲು ನೆರವಾಗಲಿದೆ. ಇದರೊಂದಿಗೆ, ವಿವಿಧ ಕ್ರೀಡೆಗಳು ಹಾಗೂ ವಿಭಿನ್ನ ಪ್ರಾದೇಶಿಕ ಹಿನ್ನೆಲೆಯ ಕ್ರೀಡಾಪಟುಗಳನ್ನು ಒಳಗೊಂಡ ಭಾರತದ್ದೇ ಆದ ಪ್ರತ್ಯೇಕ ಕ್ರೀಡಾಪಟು ಪ್ರದರ್ಶನ ದತ್ತಾಂಶ ಸಂಸ್ಥೆಯನ್ನು ನಿರ್ಮಿಸಲು ಈ ಇನ್ ಸ್ಟಿಟ್ಯೂಟ್ ಕೊಡುಗೆ ನೀಡಲಿದೆ.
ಮೂರನೆಯದಾದ ಸಂಶೋಧನೆ ಸ್ತಂಭವು ಅನ್ವಯಿಕ ಸಂಶೋಧನೆ, ಹೊಸ ಆವಿಷ್ಕಾರ, ಉದ್ಯಮ ಹಾಗೂ ವಿಶ್ವವಿದ್ಯಾಲಯಗಳ ನಡುವಿನ ಸಹಯೋಗ ಮತ್ತು ಜ್ಞಾನ ವಿನಿಮಯ ಯೋಜನೆಗಳ ಮೂಲಕ ಭಾರತೀಯ ಮೂಲದ ಕ್ರೀಡಾ ವಿಜ್ಞಾನ ಜ್ಞಾನವನ್ನು ಉತ್ಪಾದಿಸುವತ್ತ ಗಮನ ಹರಿಸಲಿದೆ. ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಜೊತೆಗೆ ಭಾರತದಲ್ಲಿ ಕ್ರೀಡಾ ವಿಜ್ಞಾನದ ಒಟ್ಟಾರೆ ಪ್ರಗತಿಗೆ ಕೊಡುಗೆ ನೀಡುವಂತಹ ಸಾಕ್ಷ್ಯಾಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ಮಹತ್ವದ ಪಾಲುದಾರಿಕೆಯ ಕುರಿತು ಮಾತನಾಡಿದ ಆಕ್ಸಿಸ್ ಬ್ಯಾಂಕ್ ನ ಹೋಲ್ ಸೇಲ್ ಬ್ಯಾಂಕ್ ಕವರೇಜ್, ಕಾರ್ಪೊರೇಟ್ ಸ್ಯಾಲರಿ, ಸಸ್ಟೇನೇಬಿಲಿಟಿ ಮತ್ತು ಸಿಎಸ್‌ಆರ್ ವಿಭಾಗದ ಗ್ರೂಪ್ ಹೆಡ್ ವಿಜಯ್ ಮುಲ್ಬಾಗಲ್ ಅವರು, "ಭಾರತದ ಕ್ರೀಡಾ ಮಹತ್ವಾಕಾಂಕ್ಷೆಗಳು ಈಗ ಒಂದು ನಿರ್ಣಾಯಕ ಹಂತವನ್ನು ತಲುಪುತ್ತಿವೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಕ್ರೀಡಾಪಟುಗಳ ನಿರಂತರ ಯಶಸ್ಸನ್ನು ಸಾಧಿಸಲು ಕೇವಲ ಪ್ರತಿಭೆ ಮತ್ತು ತರಬೇತಿ ಮಾತ್ರ ಸಾಲದು, ಅದರೊಂದಿಗೆ ದೇಶೀಯ ಕ್ರೀಡಾ ವಿಜ್ಞಾನ ಮತ್ತು ಕ್ರೀಡಾ ವೈದ್ಯಕೀಯ ಕ್ಷೇತ್ರದ ಭದ್ರ ಬುನಾದಿಯೂ ಅತ್ಯಗತ್ಯವಾಗಿದೆ. ಭಾರತವು ಕ್ರೀಡಾ ರಂಗದಲ್ಲಿ ದಿನೇದಿನೆ ಹೆಚ್ಚಿನ ಯಶಸ್ಸನ್ನು ಸಾಧಿಸುತ್ತಿದ್ದರೂ, ಪ್ರಸ್ತುತ ವಿದೇಶಿ ಪ್ರದರ್ಶನ ದತ್ತಾಂಶ ಮತ್ತು ಮಾನದಂಡಗಳನ್ನೇ ಹೆಚ್ಚಾಗಿ ಅವಲಂಬಿಸಿದೆ. ಇವು ಭಾರತೀಯ ಕ್ರೀಡಾಪಟುಗಳ ಅಗತ್ಯತೆಗಳು ಮತ್ತು ವಾಸ್ತವಕ್ಕೆ ಸಂಪೂರ್ಣವಾಗಿ ಹೊಂದುವುದಿಲ್ಲ. ಕ್ರೀಡಾ ದತ್ತಾಂಶ, ಸಂಶೋಧನೆ, ವಿಶ್ಲೇಷಣೆ ಹಾಗೂ ಪರಿಣತಿಯನ್ನು ಒಂದೇ ಸೂರಿನಡಿ ತಂದು, ದೇಶದಲ್ಲೇ ಅತ್ಯಂತ ಬಲಿಷ್ಠ ಕ್ರೀಡಾ ವಿಜ್ಞಾನದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಗೋಸ್ಪೋರ್ಟ್ಸ್ ಫೌಂಡೇಶನ್ ಜೊತೆ ಕೈಜೋಡಿಸಿರುವುದಕ್ಕೆ ಆಕ್ಸಿಸ್ ಬ್ಯಾಂಕ್ ಹೆಮ್ಮೆ ಪಡುತ್ತದೆ" ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಗೋಸ್ಪೋರ್ಟ್ಸ್ ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ ನಂದನ್ ಕಾಮತ್ ಅವರು, "ನಿರಂತರ ಕ್ರೀಡಾ ಯಶಸ್ಸು ಎಂಬುದು ಬಲಿಷ್ಠ ಬುನಾದಿಯ ಮೇಲೆ ಮಾತ್ರ ನಿರ್ಮಾಣವಾಗುತ್ತದೆ ಎಂಬ ಉಭಯ ಸಂಸ್ಥೆಗಳ ನಂಬಿಕೆಗೆ ಈ ಸಹಯೋಗವೇ ಸಾಕ್ಷಿಯಾಗಿದೆ. ಶ್ರೇಷ್ಠ ಕ್ರೀಡಾಪಟುಗಳು ಉನ್ನತ ವ್ಯವಸ್ಥೆಗಳಿಂದ ಹೊರಹೊಮ್ಮುತ್ತಾರೆ ಮತ್ತು ಅಂತಹ ವ್ಯವಸ್ಥೆಗಳು ನುರಿತ ಜನರು, ಜ್ಞಾನ ಮತ್ತು ನಿರಂತರ ಆವಿಷ್ಕಾರಗಳ ಮೇಲೆ ಅವಲಂಬಿತವಾಗಿರುತ್ತವೆ. ಭಾರತೀಯ ಕ್ರೀಡಾ ರಂಗಕ್ಕೆ ಅತ್ಯಂತ ವೇಗದ, ಉನ್ನತ ಮಟ್ಟದ ಮತ್ತು ಬಲಿಷ್ಠವಾದ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ" ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಗೋಸ್ಪೋರ್ಟ್ಸ್ ಫೌಂಡೇಶನ್ ನ ಸಿಇಒ ಸೌಗತೋ ಬ್ಯಾನರ್ಜಿ ಅವರು, "ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಗೋಸ್ಪೋರ್ಟ್ಸ್ ಫೌಂಡೇಶನ್ ನ ಈವರೆಗಿನ ಸಾಧನೆ ಹಾಗೂ ಭವಿಷ್ಯದ ಬದ್ಧತೆಯನ್ನು ನಂಬಿದ ಆಕ್ಸಿಸ್ ಬ್ಯಾಂಕ್ ಗೆ ನಾವು ಕೃತಜ್ಞರಾಗಿದ್ದೇವೆ. ಸಾಮಾನ್ಯ ಕ್ರೀಡಾ ಸಹಭಾಗಿತ್ವದಿಂದ ಹಿಡಿದು ಒಲಿಂಪಿಕ್ ನಂತಹ ಕ್ರೀಡಾಕೂಟಗಳ ಪೋಡಿಯಂವರೆಗೆ ಭಾರತದ ನೈಜ ಕ್ರೀಡಾ ಸಾಮರ್ಥ್ಯವನ್ನು ಜಾಗೃತಗೊಳಿಸುವಂತಹ ಹಲವು ಮಹತ್ವದ ಯೋಜನೆಗಳನ್ನು ದಿ ಪರ್ಫಾರ್ಮೆನ್ಸ್ ಇನ್ ಸ್ಟಿಟ್ಯೂಟ್ ಅಡಿಯಲ್ಲಿ ಪ್ರಕಟಿಸಲು ನಾವು ಉತ್ಸುಕರಾಗಿದ್ದೇವೆ" ಎಂದರು.
ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ (ಸಿಎಸ್ಇ) ಸಂಸ್ಥಾಪಕ ಮತ್ತು ಪ್ರವರ್ತಕರಾದ ವಿವೇಕ್ ಕುಮಾರ್ ಅವರು ಮಾತನಾಡಿ, "ಪ್ರತಿಯೊಬ್ಬ ಕ್ರೀಡಾಪಟುವು ತನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುವ ಉದ್ದೇಶದಿಂದಲೇ ಸಿಎಸ್‌ಇ ಅನ್ನು ನಿರ್ಮಿಸಲಾಗಿದೆ. ಈಗ ಸ್ಥಾಪನೆಯಾಗುತ್ತಿರುವ ಎಜಿಟಿಪಿಐ ಸಂಸ್ಥೆಯು ಕ್ರೀಡಾ ವಿಜ್ಞಾನ, ಸಾಮರ್ಥ್ಯ ಪರೀಕ್ಷೆ ಮತ್ತು ಸಂಶೋಧನೆಯಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಆ ವಾತಾವರಣವನ್ನು ಮತ್ತಷ್ಟು ಬಲಪಡಿಸಲಿದೆ. ಈ ಜಾಗತಿಕ ಮಟ್ಟದ ಸಂಸ್ಥೆಯನ್ನು ನಮ್ಮ ಸಿಎಸ್‌ಇ ಆವರಣದಲ್ಲೇ ಸ್ಥಾಪಿಸಲು ನಿರ್ಧರಿಸಿದ ಆಕ್ಸಿಸ್ ಬ್ಯಾಂಕ್ ಮತ್ತು ಗೋಸ್ಪೋರ್ಟ್ಸ್ ಫೌಂಡೇಶನ್ ಗೆ ಧನ್ಯವಾದಗಳು" ಎಂದು ತಿಳಿಸಿದರು.