ಸಾಗರದ ಎಲ್‌ಬಿ ಕಾಲೇಜಿನಲ್ಲಿ ವಿವಿಧ ಪರಿಸರ ಸಂಘಟನೆಗಳಿಂದ ಆಯೋಜಿಸಿದ್ದ ಪಾರಂಪರಿಕ ಕೋಟೆ ಕಾಡುಗಳು ಹಾಗೂ ಕೆರೆಗಳ ಸಂರಕ್ಷಣೆ ಕಾರ್ಯತಂತ್ರ ಕುರಿತ ವಿಚಾರ ಸಂಕಿರಣವನ್ನು ಅನಂತ ಹೆಗಡೆ ಅಶೀಸರ ಉದ್ಘಾಟಿಸಿದರು. ಬಿ.ಎಸ್.ಸೋಮಶೇಖರ್, ಡಾ. ಶೇಜೇಶ್ವರ್, ಡಾ. ವೆಂಕಟೇಶ್ ಜೋಯಿಸ್, ನರಸಿಂಹ, ಡಾ. ಪ್ರಕಾಶ್ ಮೇಸ್ತಾ, ಗಣಪತಿ ಹುಲಿಮನೆ, ಕೆ.ವೆಂಕಟೇಶ್ ಇತರರಿದ್ದರು.  
ನ್ಯೂಸ್

ಕೋಟೆ, ಕೆರೆ ರಕ್ಷಣೆಗೆ ಜಾಗೃತಿ ಅಗತ್ಯ

ಸಾಗರ: ನಮ್ಮ ಕೆರೆ, ಕೋಟೆ, ಅವುಗಳ ಗತವೈಭವ ಇವುಗಳನ್ನು ಮಾತ್ರ ನಾವು ಮೆಲುಕು ಹಾಕುತ್ತೇವೆ. ಆದರೆ ಅದರ ಜತೆಜತೆಗೆ ಆ ಪ್ರದೇಶದ ಜನ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡರು ಎಂಬುದು ಸಹ ಮುಖ್ಯವಾಗುತ್ತದೆ. ಈ ದೃಷ್ಟಿಯಲ್ಲಿಯೂ ಚರ್ಚೆಗಳಾದರೆ ಆ ಪ್ರದೇಶದ ಮಣ್ಣಿನ ಗುಣಕ್ಕೆ ಮಹತ್ವ ಸಿಗುತ್ತದೆ ಬೆಂಗಳೂರಿನ ಸಸ್ಯಶಾಸ ವಿಜ್ಞಾನಿ ಬಿ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟರು.

ಸಾಗರದ ಎಲ್‌ಬಿ ಕಾಲೇಜಿನಲ್ಲಿ ವೃಕ್ಷಲಕ್ಷ ಆಂದೋಲನ, ಮರಡವಳ್ಳಿ ಗ್ರಾಮ ಅರಣ್ಯ ಸಮಿತಿ, ಸಾಗರ ಎಂಡಿಎಫ್, ಜೀವ ವೈವಿಧ್ಯತಾ ನಿರ್ವಹಣಾ ಸಮಿತಿ, ತಾಪಂ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಪಾರಂಪರಿಕ ಕೋಟೆ ಕಾಡುಗಳು ಹಾಗೂ ಕೋಟೆ ಕೆರೆಗಳ ಸಂರಕ್ಷಣೆ ಕಾರ್ಯತಂತ್ರ ಕುರಿತು ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಕಾಲದ ಪರೀಕ್ಷೆಯಲ್ಲಿ ಗೆದ್ದುಬಂದಿರುವ ನೆಲೆಗಳಿಗೆ ತನ್ನದೇ ಆದ ಸೂತ್ರವಿರುತ್ತದೆ. ಆ ಸೂತ್ರಗಳನ್ನು ಮತ್ತೆ ಮೆಲುಕುಹಾಕುವ, ಪರಿಸರ ಉಳಿವಿಗೆ ಸಂಬಂಧಿಸಿ ಅವುಗಳನ್ನು ಜೋಡಿಸಿಕೊಳ್ಳುವ ಪ್ರಯತ್ನ ಆಗಬೇಕಾಗಿದೆ. ಅಲ್ಲಿ ನಿರ್ಮಾಣವಾದ ಆ ಕಾಲದ ಶಿಲ್ಪ, ಕಲೆಯ ಜತೆಯಲ್ಲಿ ಪ್ರಾದೇಶಿಕ ಪರಿಸರದ ಜೀವವೈವಿಧ್ಯತೆಯನ್ನೂ ನಾವು ಗಮನಿಸಬೇಕಾದ ಅಗತ್ಯವಿದೆ. ಹಾಗೆಯೇ ಅದನ್ನು ಕಾಪಾಡಿಕೊಳ್ಳುವ ಚಿಂತನೆಗಳು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಾತತ್ವ ಇಲಾಖೆ ಪ್ರಭಾರ ನಿರ್ದೇಶಕ ಹಾಗೂ ಇತಿಹಾಸ ತಜ್ಞ ಡಾ. ಶೇಜೇಶ್ವರ್, ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಅಪರೂಪದ ಜೀವ ವೈವಿಧ್ಯವಿದೆ. ಕೋಟೆ ಕೆರೆಗಳಿವೆ. ಅವುಗಳನ್ನು ಬರೀ ಕಾನೂನು, ಕಾಯ್ದೆಗಳಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಜನರಲ್ಲಿ ಪರಂಪರೆಯನ್ನು ಉಳಿಸಿಕೊಳ್ಳುವ ಮನೋಪ್ರವೃತ್ತಿ ಮೂಡಬೇಕು ಎಂದರು.

ವಿನಾಶದ ಅಂಚಿನಲ್ಲಿರುವ ಸಸ್ಯ ಪ್ರಭೇದಗಳು ಸೇರಿ ಕೋಟೆ ಅರಣ್ಯಗಳ ಸಸ್ಯ ವೈವಿಧ್ಯವನ್ನು ಅಭ್ಯಾಸ ಮಾಡಬೇಕಾಗಿದೆ. ಇದಕ್ಕಾಗಿ ಈಗಾಗಲೇ ರಾಜ್ಯದ ಇತಿಹಾಸಕಾರರು, ಪರಿಸರವಾದಿಗಳು, ವಿಜ್ಞಾನಿಗಳು ನಮ್ಮ ಜತೆ ಕೈಜೋಡಿಸಿದ್ದಾರೆ ಎಂದು ಜೀವವೈವಿಧ್ಯತಾ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಪಾರಂಪರಿಕ ಕೋಟೆ ಕಾಡುಗಳು ಹಾಗೂ ಕೋಟೆ ಕೆರೆಗಳ ಸಂರಕ್ಷಣೆ ಕಾರ್ಯತಂತ್ರ ಹಾಗೂ ಪ್ರಾಚೀನ ಇತಿಹಾಸದ ಕುರಿತು ಕೆಳದಿ ಡಾ. ವೆಂಕಟೇಶ್ ಜೋಯಿಸ್, ನರಸಿಂಹ ಸಾತೊಡ್ಡಿ ಯಲ್ಲಾಪುರ, ಡಾ. ಪ್ರಕಾಶ್ ಮೇಸ್ತಾ ಹೊನ್ನಾವರ, ಗಣಪತಿ ಹುಲಿಮನೆ ಇತರರು ವಿಷಯ ಮಂಡಿಸಿದರು. ಜೀವವೈವಿಧ್ಯತಾ ಮಂಡಳಿಯ ಎಎಸ್‌ಎ್ ಗೋವರ್ಧನ್, ಲಾಲ್‌ಬಹದ್ದೂರ್ ಕಾಲೇಜಿನ ಪ್ರಾಚಾರ್ಯ ಪ್ರೊ. ಲಕ್ಷ್ಮೀಶ, ಮರಡುವಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಕೆ.ವಿ.ಮಂಜುನಾಥ್, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಕೆ.ವೆಂಕಟೇಶ್, ಅಶೋಕ್, ಸುಬ್ಬರಾವ್, ಶ್ರೀಪಾದ ಬಿಚ್ಚುಗತ್ತಿ ಇತರರಿದ್ದರು.