ಭದ್ರಾವತಿ-ಮೊಸರಹಳ್ಳಿ ನಡುವೆ ರೈಲ್ವೆ ಕ್ರಾಸಿಂಗ್‌ನಲ್ಲಿ ಬಿ.ಕೆ.ಪ್ರಕಾಶ್ ಜಾಗೃತಿ ಪ್ರಚಾರ ನಡೆಸಿದರು. ರಘುನಾಥ್ ಹಾಗೂ ಸಿಬ್ಬಂದಿ ಇದ್ದರು.  
ನ್ಯೂಸ್

ಭದ್ರಾವತಿಯಲ್ಲಿ ರೈಲ್ವೆ ಪೊಲೀಸರಿಂದ ಜಾಗೃತಿ

ಶಿವಮೊಗ್ಗ: ರೈಲ್ವೆ ಪೊಲೀಸರು ಸೋಮವಾರ ಭದ್ರಾವತಿ ತಾಲೂಕಿನ ವಿವಿಧೆಡೆ ರೈಲ್ವೆ ಸುರಕ್ಷತೆ, ಕ್ರಾಸಿಂಗ್‌ಗಳಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಭದ್ರಾವತಿ-ಮೊಸರಹಳ್ಳಿ ನಡುವಿನ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 30ರ ಬಳಿ ಮೈಕ್ ಮೂಲಕ ಪ್ರಚಾರ ಮಾಡಿದ ಶಿವಮೊಗ್ಗ ರೈಲ್ವೆ ಪೊಲೀಸ್ ಪೋಸ್ಟ್ ಕಮಾಂಡರ್ ಬಿ.ಕೆ.ಪ್ರಕಾಶ್, ರೈಲು ಬರುವ ಸಂದರ್ಭದಲ್ಲಿ ಹಳಿಗಳ ಮೇಲೆ ಜಾನುವಾರುಗಳ ಸಂಚಾರವಿರದಂತೆ ಗಮನಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ವಂದೇ ಭಾರತ್ ಹಾಗೂ ಕೆಲ ಎಕ್ಸ್‌ಪ್ರೆಸ್ ರೈಲುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕಲ್ಲು ತೂರಾಟದ ವಿರುದ್ಧ ಜಾಗೃತಿ ಮೂಡಿಸುವ ಸಂಬಂಧ ಬಾರಂದೂರು ರೈಲ್ವೆ ಟ್ರಾೃಕ್ ಸಮೀಪದ ಸೇಂಟ್ ಡಾಮಿನಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳಿಗೆ ರೈಲ್ವೆ ಇಲಾಖೆ ಕಾರ್ಯಶೈಲಿ, ಕಲ್ಲು ತೂರಾಟ ನಡೆಸಿದವರ ವಿರುದ್ಧ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದರು. ಭದ್ರಾವತಿ ಎಎಸ್‌ಐ ರಘುನಾಥ್ ಹಾಗೂ ಸಿಬ್ಬಂದಿ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.