ನ್ಯೂಸ್

ಕೊರೊನಾ ವೈರಸ್ ಬಗ್ಗೆ ಜಾಗೃತಿ ಮುಖ್ಯ

lakshmihegde

ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡು ಈಗ ವಿಶ್ವದ ಬಹುತೇಕ ದೇಶಗಳಿಗೆ ಪಸರಿಸಿರುವ ಕರೊನಾ ವೈರಸ್ (ಕೋವಿಡ್-19) ಜನರಲ್ಲಿ ಆತಂಕವನ್ನೂ ಹಬ್ಬಿಸಿದೆ. ಚೀನಾದಲ್ಲಿ ಎರಡು ಸಾವಿರಕ್ಕಿಂತ ಅಧಿಕ ಮಂದಿ ಇದರಿಂದಾಗಿ ಪ್ರಾಣಕಳೆದುಕೊಂಡಿದ್ದು, ಇರಾನ್, ದಕ್ಷಿಣ ಕೊರಿಯಾ ಮುಂತಾದೆಡೆಯೂ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಚೀನಾದಲ್ಲಿ ಮುಕ್ತ ಮಾಧ್ಯಮ ಇಲ್ಲದ್ದರಿಂದಾಗಿ ಅಲ್ಲಿನ ಸರ್ಕಾರ ಹೇಳಿದ್ದನ್ನು ಮಾತ್ರ ಹೊರಜಗತ್ತು ನಂಬಬೇಕೇ ವಿನಾ, ಸ್ವಯಂಪರಿಶೀಲನೆಗೆ ಅವಕಾಶವಿಲ್ಲ. ಹೀಗಾಗಿ ಅಲ್ಲಿನ ನೈಜ ಚಿತ್ರಣವೇನೆಂಬುದು ಮುಸುಕಿನಲ್ಲಿಯೇ ಇದೆ ಎಂದರೆ ತಪ್ಪಲ್ಲ. ಅದೇನೆ ಇದ್ದರೂ, ವೈರಸ್ ಬೇರೆ ಬೇರೆ ದೇಶಗಳಿಗೆ ವೇಗವಾಗಿ ಹಬ್ಬುತ್ತಿರುವುದು ಮಾತ್ರ ಕಳವಳಕಾರಿಯೇ. ಅಮೆರಿಕದಂತಹ ದೇಶದಲ್ಲಿಯೂ ಕರೊನಾ ಹಾವಳಿ ಶುರುವಾಗಿದೆ.

ಆದರೆ ಬರೀ ಹೆದರಿಕೆಯಿಂದ ಪ್ರಯೋಜನವಿಲ್ಲ. ರೋಗದ ಕಾರಣ, ಪರಿಹಾರದ ಬಗ್ಗೆ ತಿಳಿದು ಮುನ್ನೆಚ್ಚರಿಕೆ ವಹಿಸುವುದು ಮುಖ್ಯ. ಒಟ್ಟಾರೆ ಸೋಂಕಿತರ ಸಂಖ್ಯೆ ಲಕ್ಷವನ್ನು ಮೀರಿರುವುದು ಸಮಸ್ಯೆಯ ಗಂಭೀರತೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಈವರೆಗೆ 28 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರಲ್ಲಿ ಇಟಲಿಯಿಂದ ಬಂದಿರುವ ಪ್ರವಾಸಿಗರನೇಕರು ಸೇರಿದ್ದಾರೆ. ಇನ್ನೂ ಹಲವರಿಗೆ ಸೋಂಕಿನ ಶಂಕೆ ಇದ್ದು, ಪರೀಕ್ಷಾವರದಿ ಬಂದ ಮೇಲೆ ಗೊತ್ತಾಗಬೇಕಿದೆ. ಕರ್ನಾಟಕದಿಂದ ದುಬೈಗೆ ತೆರಳಿ ವಾಪಸಾದ ಒಬ್ಬನಿಗೆ ಸೋಂಕು ದೃಢಪಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಾಗಲೇ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ.

ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್​ಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಸಂಬಂಧಪಟ್ಟ ಸಚಿವರು ಹೇಳಿದ್ದಾರೆ. ‘ಜನರು ಹೆದರುವ ಅಗತ್ಯವಿಲ್ಲ, ನಾವು ಪರಿಸ್ಥಿತಿ ಮೇಲೆ ನಿಗಾ ಇಟ್ಟಿದ್ದೇವೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯಾದಿಯಾಗಿ ಅನೇಕ ನಾಯಕರು ಭರವಸೆ ನೀಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರನ್ನು ವಿಮಾನನಿಲ್ದಾಣದಲ್ಲಿ ತಪಾಸಣೆಗೊಳಪಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಕರೊನಾ ವೈರಸ್ ಹಬ್ಬಿದ ದೇಶಗಳಿಗೆ ಭೇಟಿಕೊಟ್ಟವರಿಂದಾಗಿ ಭಾರತಕ್ಕೂ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಇಂಥ ಕ್ರಮ ಅನಿವಾರ್ಯ.

ಇವತ್ತಿನ ದಿನಮಾನದಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳುವವರ ಪ್ರಮಾಣ ಹೆಚ್ಚಿರುವುದರಿಂದ ವೈರಸ್ ಪಸರಿಸುವಿಕೆಗೂ ಸುಲಭವಾಗಿದೆ. ಭಾರತದಂಥ ದೇಶದಲ್ಲಿ ವೈರಸ್ ಹಬ್ಬತೊಡಗಿದರೆ ನಿಯಂತ್ರಣ ಬಹುಕಷ್ಟ ಎಂಬ ಹಿನ್ನೆಲೆಯಲ್ಲಿ ಜನರು ಕೂಡ ಈ ಬಗ್ಗೆ ಮಾಹಿತಿ ಪಡೆದು ಜಾಗೃತರಾಗಿರುವುದು ಅಗತ್ಯ. ಕರೊನಾ ವೈರಸ್ ರೋಗಲಕ್ಷಣಗಳು, ಮುನ್ನೆಚ್ಚರಿಕೆ, ಆಹಾರಕ್ರಮ ಇತ್ಯಾದಿ ಕುರಿತು ಆರೋಗ್ಯ ಸಂಸ್ಥೆಗಳು ಜನರಿಗೆ ಮಾಹಿತಿ ನೀಡುತ್ತಿವೆ. ಆದರೆ ಈ ಕಾಯಿಲೆಗೆ ಇನ್ನೂ ನಿರ್ದಿಷ್ಟ ಔಷಧ ಕಂಡುಹಿಡಿದಿಲ್ಲವಾದ್ದರಿಂದ ರೋಗಲಕ್ಷಣದ ಆಧಾರದ ಮೇಲೆ ವೈದ್ಯರು ಔಷಧ ನೀಡಬೇಕಾಗುತ್ತದೆ. ಇವೆಲ್ಲದರ ಜತೆಗೆ, ಬಾವಲಿ ಮುಂತಾದ ಪ್ರಾಣಿಗಳಿಂದಾಗಿ ಈ ವೈರಸ್ ಹರಡಿರಬಹುದು ಎಂಬ ಶಂಕೆಯು ಜೀವನಶೈಲಿ, ಆಹಾರಕ್ರಮ ಬಗ್ಗೆಯೂ ಜನರು ಗಮನನೀಡಬೇಕೆಂಬ ಸಂದೇಶವನ್ನು ಈ ಪ್ರಸಂಗ ನಮಗೆ ನೀಡುತ್ತದೆ. ಸಾತ್ವಿಕ ಜೀವನಶೈಲಿಯು ಅನೇಕ ಸಮಸ್ಯೆಗಳು ಬರದಂತೆ ನಿಯಂತ್ರಕವಾಗಿ ಕೆಲಸಮಾಡುತ್ತದೆ ಎಂಬುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಇಂದಿನ ಆಧುನಿಕ, ವೇಗದ ಜೀವನಕ್ರಮ ಅನೇಕ ಸಮಸ್ಯೆಗಳಿಗೆ ಮೂಲ ಎಂಬುದನ್ನು ಮರೆಯಬಾರದು.