ನ್ಯೂಸ್

ಹೆಚ್ಚಿನ ಇಳುವರಿ ನೀಡುವ ತಳಿ ಆವಿಷ್ಕಾರ

ಹುಣಸೂರು: ಹೆಚ್ಚಿನ ಇಳುವರಿ ನೀಡುವ ಅವರೆ ಮತ್ತು ಮೀಟರ್ ಅಲಸಂದೆ ಬೆಳೆ ತಳಿಗಳನ್ನು ಆವಿಷ್ಕರಿಸಲಾಗಿದ್ದು, ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜಿ.ಎಂ.ವಿನಯ್ ತಿಳಿಸಿದರು.

ತಾಲೂಕಿನ ಗಾವಡಗೆರೆಯ ಹುಲ್ಯಾಳು ಗ್ರಾಮದಲ್ಲಿ ಆಯೋಜಿಸಿದ್ದ ಅವರೆ ಮತ್ತು ಮೀಟರ್ ಅಲಸಂದೆ ಕುರಿತ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೀಟರ್ ಅಲಸಂದೆ ಬೆಳೆಯಲ್ಲಿ ಅರ್ಕ ಮಂಗಳ ಮತ್ತು ಅವರೆ ಬೆಳೆಯಲ್ಲಿ ಅರ್ಕ ಅಮೋಘ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವರೆಕಾಯಿಗೆ ಬಹುಮುಖ್ಯವಾಗಿ ಬಾಧಿಸುವ ಕಾಯಿಕೊರೆತ ರೋಗ ಬಾಧೆಯನ್ನು ತಡೆಯಬಲ್ಲ ಶಕ್ತಿಯನ್ನು ಅರ್ಕ ಅಮೋಘ ತಳಿ ಹೊಂದಿದೆ. ಅಡುಗೆಗೆ ಬಳಸಲು ಉತ್ತಮ ಸುವಾಸನೆಯನ್ನೂ ಹೊಂದಿದೆ. ಮೀಟರ್ ಅಲಸಂದೆಗೆ ಅರ್ಕ ಮಂಗಳ ತಳಿಯು ಕೊಯ್ಲಿಗೆ ಬೇಗ ಬಂದು, ನಾರು ಇಲ್ಲದೆ ಉದ್ದವಾಗಿ ಹಾಗೂ ಬೇರೆ ತಳಿಗಿಂತಲೂ ಹೆಚ್ಚು ದಪ್ಪ ಬಂದು ಉತ್ತಮ ಇಳುವರಿ ಕೊಡುತ್ತದೆ ಎಂದರು.

ಕೆವಿಕೆಯ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ವೈ.ಪಿ.ಪ್ರಸಾದ್ ಮಾತನಾಡಿ, ಅವರೆಕಾಯಿಗೆ ಕಂಡುಬರುವ ಕಾಯಿಕೊರಕ ರೋಗಬಾಧೆ ನಿಯಂತ್ರಿಸಲು ರೈತರು ಮೋಹಕ ಬಲೆಗಳ ಅಳವಡಿಕೆ, ಬೇವಿನ ಎಣ್ಣೆ ಸಿಂಪಡಣೆ ಮತ್ತು ಅವಶ್ಯಕತೆಗನುಗುಣವಾಗಿ ಕೀಟನಾಶಕ(ಇಮಾಮೆಕ್ಟಿನ್ ಬೆಂಜೋಯೆಟ್ 0.5 ಗ್ರಾಂ ಪ್ರತೀ ಲೀಟರ್ ನೀರಿಗೆ) ವನ್ನು ಉಪಯೋಗಿಸಿದಲ್ಲಿ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.