ನ್ಯೂಸ್

ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ಶಿಕ್ಷಕರಿಗೆ ಸನ್ಮಾನ

ಹುಣಸೂರು: ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಸಾಧನೆಗೆ ಕಾರಣಕರ್ತರಾದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿದ ಫ್ರಾನ್ಸಿಸ್ ಕ್ಸೇವಿಯರ್ಸ್‌ ಚರ್ಚ್‌ನ ಫಾದರ್ ಜಾರ್ಜ್ ಮಾರ್ಟೀಸ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಆಧುನಿಕ ಜೀವನಶೈಲಿ, ಸಾಮಾಜಿಕ ಜಾಲತಾಣಗಳ ಬಳಕೆ ವಿದ್ಯಾರ್ಥಿಗಳನ್ನು ಅಡ್ಡದಾರಿಗೆ ಕೊಂಡೊಯ್ಯುವ ಸಾಧ್ಯತೆ ಇದೆ. ಇವುಗಳನ್ನು ಬದಿಗೊತ್ತಿ ಸಾಧನೆಯ ಹಾದಿಯಲ್ಲಿ ದೃಢ ಹೆಜ್ಜೆಯಿಡಬೇಕೆಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಸಿಸ್ಟರ್ ಅನಿತಾ ಡಿಸೋಜಾ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವುದನ್ನು ಕಾಣುವುದೇ ಶಿಕ್ಷಕರ ಕನಸಾಗಿರುತ್ತದೆ ಎಂದರು.

ಕಳೆದ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು (590) ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮಸ್ಥಾನ ಪಡೆದ ಚಂದನಾ ಲೋಕೇಶ್, ವಾಣಿಜ್ಯವಿಭಾಗದಲ್ಲಿ 581 ಅಂಕಗಳಿಸಿದ ಮೊಮ್ಮಿನ ಮಹಮ್ಮದಿ, ಕಲಾವಿಭಾಗದಲ್ಲಿ 579 ಅಂಕಗಳಿಸಿದ ದಿವ್ಯಾ ಹಾಗೂ ಪಾಲಕರು ಮತ್ತು ವಿವಿಧ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

2003-04ರ ಕಾಲೇಜಿನ ಮೊದಲ ಬ್ಯಾಚ್‌ನಲ್ಲಿ ಅತಿಹೆಚ್ಚು ಅಂಕಗಳಿಸಿದ ಹಿರಿಯ ವಿದ್ಯಾರ್ಥಿಗಳನ್ನು ಕರೆಯಿಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಶೃತಿ, ಸ್ವಾಮಿ, ಚೇತನ್ ಸೇರಿದಂತೆ ಅಧ್ಯಾಪಕವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು. .