ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀಶಾ ಸೌಹಾರ್ದ ಸೊಸೈಟಿಯ ವತಿಯಿಂದ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸನ್ಮಾನ ಕಾರ್ಯಕ್ರಮ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. 
ನ್ಯೂಸ್

ಶ್ರೀಶಾ ವತಿಯಿಂದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀಶಾ ಸೌಹಾರ್ದ ಸೊಸೈಟಿಯ ವತಿಯಿಂದ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಸನ್ಮಾನ ಕಾರ್ಯಕ್ರಮ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಗ್ಲಿಷ್ ಮಾಧ್ಯಮದ ಆರ್ಭಟದ ನಡುವೆ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿ ಸರಕಾರಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡ.90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ವಿಧ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಶ್ರೀಶಾ ಸೊಸೈಟಿಯು ಅವರಿಗೆ ಸಹಾಯಧನದ ಜೊತೆಗೆ ಗೌರವಪೂರ್ವಕ ಸನ್ಮಾನ ಮಾಡಿರುವುದು ಅತೀವ ಸಂತಸ ತಂದಿದೆ. ಈ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಸಹಾಯಧನ ನೀಡುವುದನ್ನು ನೋಡಿದ್ದೇವೆ. ಆದರೆ 120 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವುದರ ಜೊತೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸನ್ಮಾನ ಮಾಡುತ್ತಿರುವುದು ಅರ್ಥಪೂರ್ಣವಾಗಿದ್ದು ತನಗೆ ಅತೀವ ಸಂತಸ ತಂದಿದೆ. ವಿದ್ಯಾರ್ಥಿಗಳು ಈ ಸನ್ಮಾನವನ್ನು ಎಂದಿಗೂ ಮರೆಯಲಾರರು. ಶ್ರೀಶಾ ಸೊಸೈಟಿಯ ಇಂತಹ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಶ್ರೀಶಾದಂತಹ ಸೊಸೈಟಿಗಳು ನಮ್ಮ ನಗರದಲ್ಲಿರುವುದು ನಮಗೆಲ್ಲಾ ಹೆಮ್ಮೆ ಹಾಗೂ ಗೌರವ. ಶ್ರೀಶಾದ ಸೇವಾ ಕಾರ್ಯಗಳು ಹೀಗೆಯೇ ಮುಂದುವರಿಯಲಿ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು ಇದರ ಅಧ್ಯಕ್ಷ ಜಿ.ನಂಜನ ಗೌಡ ಅಧ್ಯಕ್ಷತೆ ವಹಿಸಿದ್ದರು.
ಶ್ರೀಶಾ ಸೌಹಾರ್ದ ಸೊಸೈಟಿಯ ಅಧ್ಯಕ್ಷ ಎಂ. ಎಸ್.ಗುರುರಾಜ್ ರವರನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪರವಾಗಿ ಅಧ್ಯಕ್ಷ ನಂಜನ ಗೌಡ ಸನ್ಮಾನಿಸಿದರು. ಶ್ರೀಕ್ಷೇತ್ರ ಶರವು ದೇವಸ್ಥಾನದ ಆಡಳಿತ ಮುಕ್ತೇಸರ ರಾಘವೇಂದ್ರ ಶಾಸ್ತ್ರಿ, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜೇಮ್ಸ್ ಕುಟಿನ ಮತ್ತು ಹೆಚ್.ಆರ್.ಈಶ್ವರ್ ಇದ್ದರು.
ಶ್ರೀಶಾದ ಅಧ್ಯಕ್ಷ ಎಂ. ಎಸ್.ಗುರುರಾಜ್ ಸ್ವಾಗತಿಸಿದರು. ನಿರ್ದೇಶಕ ಪ್ರಸನ್ನ ಕುಮಾರ ವಂದಿಸಿದರು. ನಿರೂಪಕ ಆರ್.ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.