ಕನ್ನಡ ಚಿತ್ರರಂಗ ಸೊರಗಿದೆ.. ಕನ್ನಡ ಚಿತ್ರಗಳನ್ನ ಒಟಿಟಿ ವೇದಿಕೆಯಲ್ಲಿ ಕೊಂಡುಕೊಳ್ಳುವವರಿಲ್ಲ ಅಂತ ಗೋಳಾಡುತ್ತಿದ್ದವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್. ಕನ್ನಡಿಗರಿಗಾಗಿಯೇ ಒಟಿಟಿ ವೇದಿಕೆ ಶುರುವಾಗಿದೆ. ಅದೇ 'ಎವಿಆರ್ ಸಿನೆ ಮ್ಯಾಕ್ಸ್'. ಅರವಿಂದ್ ವೆಂಕಟೇಶ್ ರೆಡ್ಡಿ ಈ ಒಟಿಟಿ ವೇದಿಕೆ ಶುರು ಮಾಡಿದ್ದು, ದಿವಂಗತ ಹಾಸ್ಯ ನಟ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ದಿವಾಕರ್ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾಗಳನ್ನ ಕೇಳೋರಿಲ್ಲ.. ಕನ್ನಡ ಚಿತ್ರಗಳನ್ನ ಒಟಿಟಿ ವೇದಿಕೆಗಳು ಖರೀದಿ ಮಾಡುತ್ತಿಲ್ಲ.. ಎಂಬ ಕೂಗು ಕೇಳಿಬರುತ್ತಲೇ ಇತ್ತು. ಅದ್ರೀಗ, ಕನ್ನಡಿಗರಿಗಾಗಿ ಕನ್ನಡಿಗರಿಂದಲೇ ಒಟಿಟಿ ವೇದಿಕೆ ಆರಂಭವಾಗಿದೆ. ಅದೇ 'ಎವಿಆರ್ ಸಿನೆ ಮ್ಯಾಕ್ಸ್'. ಇತ್ತೀಚೆಗಷ್ಟೇ 'ಎವಿಆರ್ ಸಿನೆ ಮ್ಯಾಕ್ಸ್' ಒಟಿಟಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಜೈಲೈ 20 ನೇ ತಾರೀಕು ಸೋಮವಾರದಿಂದ ಎವಿಆರ್ ಸಿನೆಮ್ಯಾಕ್ಸ್ ಲೈವ್ ಸ್ಟ್ರೀಮ್ಗೆ ರೆಡಿಯಾಗಿದೆ.
'ಎವಿಆರ್ ಸಿನೆ ಮ್ಯಾಕ್ಸ್' ಅನಾವರಣ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ ಜಯಮಾಲ, ನಿರ್ದೇಶಕರಾದ ಟಿ ಎಸ್ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಟಿ ಎನ್ ಸೀತಾರಾಮ್, ಪಿ ಶೇಷಾದ್ರಿ, ಶಶಾಂಕ್, ನಾಗಣ್ಣ, ನಟರಾದ ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ಮೋಹನ್, ಗುರುಕಿರಣ್, ಥ್ರಿಲ್ಲರ್ ಮಂಜು, ಶಿವಧ್ವಜ್, ನಟಿಯರಾದ ಗಿರಿಜಾ ಲೋಕೇಶ್, ಸುಧಾರಾಣಿ, ತಾರಾ ಅನುರಾಧ, ಹರ್ಷಿಕಾ ಪೂಣಚ್ಛ, ಪದ್ಮಜಾ ರಾವ್, ನಿರ್ಮಾಪಕ ಯೋಗೀಶ್ ದ್ವಾರಕೀಶ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅರವಿಂದ್ ವೆಂಕಟೇಶ್ ರೆಡ್ಡಿ ಏನಂದರು?
''ಇದು ಕನ್ನಡಿಗರಿಂದ ಕನ್ನಡಿಗರಿಗಾಗಿಯೇ ಆರಂಭಿಸಿರುವ ಒಟಿಟಿ. ಕನ್ನಡ ಚಲನಚಿತ್ರ ಹಾಗೂ ಸೃಜನಾತ್ಮಕ ಮನರಂಜನಾ ವಿಷಯಗಳನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ರೂಪುಗೊಂಡಿರುವ ಒಟಿಟಿಯೂ ಹೌದು. ಈ ಒಟಿಟಿಯಲ್ಲಿ ಈಗಾಗಲೇ 750ಕ್ಕೂ ಹೆಚ್ಚು ಸಿನಿಮಾಗಳಿವೆ'' ಎಂದು 'ಎವಿಆರ್ ಸಿನೆ ಮ್ಯಾಕ್ಸ್' ಒಟಿಟಿ ಸ್ಥಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ತಿಳಿಸಿದರು.
'ಎವಿಆರ್ ಸಿನೆ ಮ್ಯಾಕ್ಸ್' ಒಟಿಟಿಯಲ್ಲಿ ರಿಯಾಲಿಟಿ ಶೋ, ಕ್ರೀಡೆ, ಸಂಗೀತ, ನೇರ ಪ್ರಸಾರದ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ನಿರ್ದೇಶಕ ರವಿ ಶ್ರೀವತ್ಸ ಅವರ 'ಗ್ಯಾಂಗ್ ಆಫ್ ಯುಕೆ' ಸಿನಿಮಾವನ್ನು ವೆಬ್ ಸಿರೀಸ್ ರೂಪದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಇನ್ನೂ ಸೃಜನ್ ಲೋಕೇಶ್ ಅವರು 'ಸೃಜಾ ಟಾಕೀಸ್' ಎಂಬ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವಾರಾಂತ್ಯದಲ್ಲಿ ಸಂಗೀತದ ಕಾರ್ಯಕ್ರಮಗಳು ಇರುತ್ತದೆ. ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಯನ್ನು ಇದರ ಮೂಲಕ ಆಸಕ್ತರು ನೇರಪ್ರಸಾರವನ್ನು ಮಾಡಬಹುದಾಗಿದೆ. ಸದ್ಯದಲ್ಲೇ ಮಲೇಷಿಯಾದಲ್ಲಿ ಅದ್ದೂರಿ ಕ್ರಿಕೆಟ್ ಟೂರ್ನಿಯನ್ನು ಸಹ ಆಯೋಜಿಸುವ ಪ್ಲಾನ್ನಿಂಗ್‌ನಲ್ಲಿದ್ದಾರೆ ಅರವಿಂದ್ ವೆಂಕಟೇಶ್ ರೆಡ್ಡಿ.