ನ್ಯೂಸ್

ರಾಸಾಯನಿಕ ಮುಕ್ತ ಆಹಾರ ಲಭ್ಯತೆ ಸವಾಲು: ಬೆಂ. ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ

ಬೆಂಗಳೂರು: ಆಹಾರ ಸೇವನೆಯಲ್ಲಿ ಕೀಟನಾಶಕಗಳ ಅಂಶ ಹೆಚ್ಚುತ್ತಿದ್ದು, ಸಮಾಜಕ್ಕೆ ರಾಸಾಯನಿಕ ಮುಕ್ತ ಆಹಾರ ಒದಗಿಸುವುದು ಸವಾಲಿನ ಕೆಲಸವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ.ಸುರೇಶ ಅಭಿಪ್ರಾಯಪಟ್ಟರು.

ನಗರದ ಯಲಹಂಕದಲ್ಲಿ ಏಷಿಯನ್ ಪಿಜಿಪಿಆರ್ ಸಂಘಟನೆ, ಬೆಂಗಳೂರು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳ ಸಸ್ಯರೋಗಶಾಸ್ತ್ರ ವಿಭಾಗದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮೂರು ದಿನಗಳ 8ನೇ ಏಷ್ಯಾ ಪಿಜಿಪಿಆರ್ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿಗೆ ಮನುಷ್ಯರ ದೇಹಕ್ಕೆ ಹಾನಿಕಾರಕ ಅಂಶಗಳು ಸೇರುವ ಸಾಧ್ಯತೆ ಹೆಚ್ಚಿದೆ. ಈ ವಿಷಕಾರಕ ಕೀಟನಾಶಕಗಳಿಂದ ಹೇಗೆ ಮುಕ್ತವಾಗಬೇಕು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಈ ನಿಟ್ಟಿನಲ್ಲಿ ರಾಸಾಯನಿಕಗಳ ಬಳಕೆಯನ್ನು ಕೃಷಿ, ತೋಟಗಾರಿಕಾ ಬೆಳೆಗಳಿಗೆ ಕಡಿಮೆ ಮಾಡಿ ಸಮಾಜಕ್ಕೆ ರಾಸಾಯನಿಕ ಮುಕ್ತ ಆಹಾರ ನೀಡಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ಆಹಾರ ಭದ್ರತೆ ಹಾಗೂ ಪರಿಸರ ಸಂರಕ್ಷಣೆ ಅಂತಾರಾಷ್ಟ್ರೀಯ ಕಾಳಜಿ ಆತಂಕಗಳ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ರಾಸಾಯನಿಕ ಪದಾರ್ಥಗಳ ಬಳಕೆ ತಗ್ಗಿಸುವ ನಿಟ್ಟಿನಲ್ಲಿ ಸಸ್ಯ ಸಮೃದ್ಧಿ ಉತ್ತೇಜಕಗಳ ಬಳಕೆ ಅರ್ಥಪೂರ್ಣ ಎನಿಸುತ್ತದೆ. ಪಿಜಿಪಿಆರ್ ಸಂಬಂಧಿತ ತಂತ್ರಜ್ಞಾನಗಳು ಪ್ರಸ್ತುತ ಕಾಲಘಟ್ಟದಲ್ಲಿ ಕುಂಠಿತವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಪಿಜಿಪಿಆರ್ ಉದ್ಯಮಶೀಲರು ಒಂದೆಡೆ ಕಲಿತು ವಿಷಯ ವಿನಿಮಯ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ರಾಯಚೂರು ಕೃಷಿ ವಿವಿ ಕುಲಪತಿ ಡಾ. ಎಂ.ಹನುಮಂತಪ್ಪ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್, ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿವಿ ಕುಲಪತಿ ಎಂ.ಕೆ.ಹೆಗಡೆ, ನವದೆಹಲಿಯ ಐಸಿಎಆರ್ ತೋಟಗಾಕಾರಿಕೆ ನಿಕಟಪೂರ್ವ ಡಿಡಿಜಿ ಡಾ. ಎ.ಕೆ. ಕೃಷ್ಣಕುಮಾರ್, ಏಷಿಯನ್ ಪಿಜಿಪಿಆರ್ ಸೊಸೈಟಿಯ ಅಧ್ಯಕ್ಷ ಪ್ರೊ. ಎಂ.ಎಸ್.ರೆಡ್ಡಿ ಸೇರಿದಂತೆ ಇನ್ನಿತರರಿದ್ದರು.