ಮುಂಬೈ: ಪ್ರತಿಯೊಬ್ಬರೂ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಬಯಸುತ್ತಾರೆ. ಇನ್ನು ಶ್ರೀಮಂತರು ಲಕ್ಷಗಟ್ಟಲೆ ಖರ್ಚು ಮಾಡಿ ಮಕ್ಕಳ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸುತ್ತಾರೆ. ಆದರೆ ಎಲ್ಲರೂ ಹಾಗೆ ಮಾಡಲು ಸಾಧ್ಯವಿಲ್ಲ. ಅವರವರ ಶಕ್ತಿಯಾನುಸಾರ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಸಾಕಷ್ಟು ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸುತ್ತಾರೆ. ಮಕ್ಕಳ ಮುಖದಲ್ಲಿ ಸಂತೋಷ ತರುತ್ತಾರೆ. ಆದರೆ ಇಲ್ಲೋರ್ವ ತಂದೆ ಪ್ರೀತಿಸುವ ಹೃದಯವಿದ್ದರೆ ಹಣದ ಅಗತ್ಯವಿಲ್ಲ, ನಿಜವಾದ ಸಂತೋಷ ಹಣದಿಂದ ಬರುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್ ನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದು, ಫೋಟೋದ ಕೆಳಗೆ ಶೀರ್ಷಿಕೆ ಹೀಗಿದೆ, ``ಒಬ್ಬ ವ್ಯಕ್ತಿಯ ಜೇಬು ದೊಡ್ಡದಾಗಿರಬೇಕಿಲ್ಲ... ಹೃದಯವಿದ್ದರೆ ಸಾಕು. ಹುಟ್ಟುಹಬ್ಬದ ಶುಭಾಶಯಗಳು ಅರ್ಪಿತಾ'' ಎಂದು ಬರೆದಿದ್ದಾರೆ. ಪೋಸ್ಟ್ ಮಾಡಿರುವ ಫೋಟೋ ಗಮನಿಸಿದರೆ ಆಟೋವೊಂದರ ಮೇಲೆ ಪೇಪರ್ ಅಂಟಿಸಲಾಗಿದ್ದು, ಪೇಪರ್ ಮೇಲೆ "ಇಂದು (11-8-2023) ನನ್ನ ಮಗಳು ಅರ್ಪಿತಾ ರಾಣಿಯ ಹುಟ್ಟುಹಬ್ಬ. ಈ ಶುಭ ಸಮಯದಲ್ಲಿ ನಾನು ನನ್ನ ಆಟೋವನ್ನು ಉಚಿತವಾಗಿ ಓಡಿಸುತ್ತೇನೆ. ಪಾವತಿಸುವ ಅಗತ್ಯವಿಲ್ಲ. ಜನ್ಮದಿನದ ಶುಭಾಶಯಗಳು ಅರ್ಪಿತಾ'' ಎಂದು ಬರೆದುಕೊಂಡಿದ್ದಾರೆ.
ಆಗಸ್ಟ್ 13 ರಂದು ಅವನೀಶ್ ಶರಣ್ ಅವರು ಪೋಸ್ಟ್ ಮಾಡಿದ ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೋಸ್ಟ್ ಅನ್ನು ಇದುವರೆಗೆ 4.4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 21 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಪೋಸ್ಟ್‌ಗೆ ನೆಟ್ಟಿಗರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. `ಹುಟ್ಟುಹಬ್ಬದ ಶುಭಾಶಯಗಳು ಅರ್ಪಿತಾ. ನಿಮಗೆ ದೊಡ್ಡ ತಂದೆ ಇದ್ದಾರೆ', `ಬರ್ತ್‌ಡೇಗೆ ಇದಕ್ಕಿಂತ ಉತ್ತಮ ಉಡುಗೊರೆ ಏನಿದೆ', `ಎಷ್ಟು ಲಕ್ಷ ಖರ್ಚು ಮಾಡಿದರೂ ಇಷ್ಟು ಸುಖ ಸಿಗುವುದಿಲ್ಲ' ಎಂದು ನೆಟ್ಟಿಗರು ಹೃದಯ ತುಂಬಿ ಕಾಮೆಂಟ್ ಮಾಡುತ್ತಿದ್ದಾರೆ.