ನ್ಯೂಸ್

ಸತ್ತ ಬಾಯ್​ಫ್ರೆಂಡ್ ದೇಹದ ವೀರ್ಯಾಣು ಬಳಸಿ ಗರ್ಭಿಣಿ ಆದ ಯುವತಿ! ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿಕೊಂಡ ಪ್ರೇಮಿ

ಕ್ಯಾನ್ಬೆರಾ: ಜತೆಯಾಗಿ ಬಾಳುವ ಯಾವುದೇ ಜೋಡಿಗೆ ತಮ್ಮದೇ ಆದ ಮಗು ಬೇಕು ಎನ್ನುವುದು ಹೆಬ್ಬಯಕೆಯಾಗಿರುತ್ತದೆ. ಅಂತೆಯೇ ಮಗುವಿಗಾಗಿ ಹಂಬಲಿಸುತ್ತಿರುವಾಗಲೇ ತನ್ನ ಪ್ರಿಯಕರನನ್ನು ಕಳೆದುಕೊಂಡ ಯುವತಿಯೊಬ್ಬಳು ಆತನ ಮೃತ ದೇಹದಿಂದ ತೆಗೆದ ವೀರ್ಯಾಣು ಬಳಸಿಕೊಂಡು ಗರ್ಭಿಣಿಯಾಗಿದ್ದಾಳೆ.

ಹೌದು. ಇದು ಸಾಧ್ಯ. ವೈದ್ಯಕೀಯ ವರದಿಗಳ ಪ್ರಕಾರ ಒಬ್ಬ ವ್ಯಕ್ತಿ ಸತ್ತ 36 ಗಂಟೆಗಳ ಅವಧಿಯಲ್ಲಿ ಆತನ ದೇಹದಿಂದ ಆರೋಗ್ಯಯುತ ವೀರ್ಯಾಣು ತೆಗೆಯಬಹುದು. ಅದೇ ರೀತಿ ಈ ಯುವತಿ ಕೂಡ ತನ್ನ ಕರುಳ ಬಳ್ಳಿ ಬೆಳೆಸಲು ಮುಂದಾಗಿದ್ದಾಳೆ.

ಆಸ್ಟ್ರೇಲಿಯಾದ ಒಲಿಂಪಿಯನ್ ಅಲೆಕ್ಸ್ ಪುಲ್ಲಿನ್ ಅವರ ಪ್ರಿಯತಮೆ ಈ ರೀತಿ ಗರ್ಭಿಣಿಯಾಗಿರುವ ಯುವತಿ. ವಿಶ್ವ ಸ್ನೋಬೋರ್ಡ್ ಚಾಂಪಿಯನ್‌ಶಿಪ್ ಅನ್ನು ಎರಡು ಬಾರಿ ಗೆದ್ದ ವಿಂಟರ್ ಒಲಿಂಪಿಯನ್ ಅಲೆಕ್ಸ್ ಪುಲ್ಲಿನ್ ಕಳೆದ ವರ್ಷ ಜುಲೈ ತಿಂಗಳಲ್ಲಿ ಅಪಘಾತದಿಂದ ಸಾವನ್ನಪ್ಪಿದರು. ಆದರೆ ಆ ಸಮಯಕ್ಕೆ ಆ ಜೋಡಿ ಮಗು ಮಾಡಿಕೊಳ್ಳುವ ಆಸೆಯನ್ನು ಹೊಂದಿದ್ದರಂತೆ. ಅಷ್ಟರಲ್ಲಾಗಲೇ ವಿಧಿ ಅವರ ಬಾಳಿನಲ್ಲಿ ಆಟವಾಡಿತ್ತು. ಆದರೆ ಈ ವಿಚಾರದಲ್ಲಿ ಮನಸ್ಸನ್ನು ಕುಗ್ಗಿಸದ ಯುವತಿ, ವೈದ್ಯರ ಬಳಿ ಮನವಿ ಮಾಡಿ ಮೃತ ದೇಹದಿಂದ ವೀರ್ಯಾಣುವನ್ನು ತೆಗೆಸಿಕೊಂಡಿದ್ದಾಳೆ. ಅದರ ಸಹಾಯದಿಂದ ಇದೀಗ ಗರ್ಭವತಿ ಆಗಿದ್ದಾಳೆ. ಬರುವ ಅಕ್ಟೋಬರ್​ನಲ್ಲಿ ನಮ್ಮ ಮಗು ಜಗತ್ತನ್ನು ಕಾಣಲಿದೆ ಎಂದು ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾಳೆ. (ಏಜೆನ್ಸೀಸ್)