ವೆಲ್ಲಿಂಗ್ಟನ್: ಸುಮಾರು ನಾಲ್ಕು ವರ್ಷಗಳವರೆಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನ್ಯೂಜಿಲೆಂಡ್ ಮೂಲದ ಯುವತಿಗೆ ಇದ್ದಂತಹ ಕಾಯಿಲೆ ಯಾವುದೆಂಬುದು ತಿಳಿಯಲು ಸ್ವತಃ ವೈದ್ಯರೇ ಕಕ್ಕಾಬಿಕ್ಕಿಯಾದಂತಹ ಅಪರೂಪ ಪ್ರಕರಣವಿದು. ದೀರ್ಘಕಾಲಿಕ ನೋವಿನಿಂದ ಯುವತಿಯೂ ಕೂಡ ದುರ್ಬಲ ಸ್ಥಿತಿಗೆ ಹೋಗಿದ್ದಳು. ಈ ವೇಳೆ ಆಕೆಯ ಪಾಲಿಗೆ ನೆರವಾಗಿದ್ದೇ ಫೇಸ್ಟೈಮಿಂಗ್ ವಿಡಿಯೋ ಕಾಲ್.
ಶರ್ನಾ ಮ್ಯಾಕ್ಮನಸ್(22) ಎಂಬಾಕೆ ಕಳೆದ ನಾಲ್ಕು ವರ್ಷ ತನ್ನ ಹೊಟ್ಟೆ ನೋವಿಗೆ ಕಾರಣ ಏನೆಂಬುದನ್ನು ತಿಳಿಯಲು ತಜ್ಞ ವೈದ್ಯರ ಬಳಿ ಹೋಗಿ ಬರುವುದನ್ನು ಮಾಡುತ್ತಿದ್ದಳು. ಅವಳ ಬಳಿಯಿದ್ದ ಹಣ ಖಾಲಿಯಾಯಿತೇ ಹೊರತು ನೋವಿಗೆ ಕಾರಣ ಮಾತ್ರ ತಿಳಿಯಲಿಲ್ಲ.
ಬಳಿಕ ಸಾಮಾಜಿಕ ಜಾಲತಾಣದಲ್ಲಿ ತನ್ನ ನೋವಿಗೆ ಏನಾದರೂ ಪರಿಹಾರ ಒದಗಿಸಿಕೊಡಿ ಎಂದು ಶರ್ನಾ ಮೊರೆ ಇಟ್ಟಿದ್ದಳು. ಆದರೆ ಅವರಿಂಬ ಬಂದ ಉತ್ತರ ಶರ್ನಾಗೆ ಖುಷಿಕೊಟ್ಟಿರಲಿಲ್ಲ. ಆದರೆ, ಆಕೆಗೆ ಕೊನೆಯಲ್ಲಿ ನೆರವಾಗಿದ್ದು ಯೂಟ್ಯೂಬ್ ವಿಡಿಯೋ. ಅದರಲ್ಲಿ ತನ್ನದೇ ಸ್ಥಿತಿಯನ್ನು ಹೊಂದಿದ್ದ ಮಹಿಳೆಗೆ ಪರಿಣಿತ ವೈದ್ಯ ಕೃಷ್ಣ ಬೊಡ್ಡು ಎಂಬುವರು ಚಿಕಿತ್ಸೆ ನೀಡುವುದು ಶರ್ನಾ ಗಮನಕ್ಕೆ ಬಂದಿತು.
ಬಳಿಕ ಕೃಷ್ಣಾರನ್ನು ಶರ್ನಾ ಸಂಪರ್ಕಿಸಿದಾಗ, ತಕ್ಷಣ ಅವರು ಶರ್ನಾ ಪರಿಸ್ಥಿತಿಗೆ ಫೇಸ್ಟೈಮ್ ವಿಡಿಯೋ ಕಾಲ್ ಮೂಲಕವೇ ಚಿಕಿತ್ಸೆ ನೀಡಲು ಆರಂಭಿಸಿದರು. ಇದೇ ರೀತಿಯ ತೊಂದರೆ ಹೊಂದಿದ್ದ ಸುಮಾರು 200 ರೋಗಿಗಳಿಗೆ ಕಳೆದ ಎರಡು ವರ್ಷಗಳಲ್ಲಿ ಕೃಷ್ಣಾ ಅವರು ಚಿಕಿತ್ಸೆ ನೀಡಿದ್ದಾರೆ. ಸುಮಾರು 20 ನಿಮಿಷಗಳ ಚಿಕಿತ್ಸೆಯಿಂದ ಖಂಡಿತವಾಗಿ ಗುಣವಾಗುವ ಭರವಸೆ ನೀಡುತ್ತಾರೆ ಕೃಷ್ಣ.
ದೇಹದಲ್ಲಿನ ಮೃದು ಅಂಗಾಂಶ ಗುಣವಾದಂತಹ ಬಹುತೇಕ ಸಮಯದಲ್ಲಿ ನರವು ತಿರುಚಿಕೊಳ್ಳುವುದಿಲ್ಲ. ಆದಾಗ್ಯೂ ಕೆಲ ಸಮಯದಲ್ಲಿ ನರವು ತಿರುಚಿಕೊಂಡಾಗ ಅದರ ನಿರಂತರ ಉತ್ತೇಜನದಿಂದ ನೋವು ಉಂಟಾಗುತ್ತದೆ ಎಂದು ಕೃಷ್ಣ ಅವರು ತಿಳಿಸಿದ್ದಾರೆ. ನರ ತಿರುಚಿಕೊಳ್ಳಲು ಗಾಯ, ಅತಿಯಾದ ಚಟುವಟಿಕೆ ಹಾಗೂ ಮಾನಸಿಕ ಸ್ಥಿತಿ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ಶನಿವಾರ 20 ನಿಮಿಷದ ಚಿಕಿತ್ಸೆಗಾಗಿ ನ್ಯೂಜಿಲೆಂಡ್ನಿಂದ ಪರ್ತ್ಗೆ ತೆರಳಿದ ಶರ್ನಾ, ತನ್ನ ಕಾಯಿಲೆಯಿಂದ ಗುಣಮುಕ್ತಾಳಾಗಿ ಇದೀಗ ನೋವು ಮುಕ್ತ ಜೀವನನ್ನು ಆರಂಭಿಸಿದ್ದಾರೆ. ಹಾಗೇ ವೈದ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಅಂದಹಾಗೆ ಕೃಷ್ಣ ಬೊಡ್ಡು ಅವರು ಆಂಧ್ರ ಪ್ರದೇಶದ ಕಾಕಿನಾಡ ಮೂಲದವರು. ಸದ್ಯ ಆಸ್ಟ್ರೇಲಿಯಾದ ರಾಯಲ್ ಪರ್ತ್ ಆಸ್ಪತ್ರೆಯ ಕಾರ್ಯನಿರ್ವಾಹಕ ಸಹ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪ್ರಖ್ಯಾತ ಅರಿವಳಿಕೆ ತಜ್ಞರು ಹೌದು.(ಏಜೆನ್ಸೀಸ್)