ಮುಂಬೈ: ಮುಖ್ಯಮಂತ್ರಿ ಏಕನಾಥ್ ಸಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಜಿಲ್ಲೆಗಳ ಹೆಸರುಗಳನ್ನು ಕ್ರಮವಾಗಿ ಛತ್ರಪತಿ ಶಿವಾಜಿನಗರ ಮತ್ತು ಧಾರಾಶಿವ ಎಂದು ಮರುನಾಮಕರಣಗೊಳಿಸಿ ಆದೇಶ ಹೊರಡಿಸಿದೆ.
ಕಳೆದ ಜುಲೈನಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ಜಿಲ್ಲೆಗಳ ಹೆಸರನ್ನು ಬದಲಾಯಿಸುವ ಬಗ್ಗೆ ಒಪ್ಪಿಗೆ ಪಡೆಯಲಾಗಿತ್ತು. ಹಾಗೆಯೇ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಗಳನ್ನೂ ಆಹ್ವಾನಿಸಲಾಗಿತ್ತು. ಅದರಂತೆ ಔರಂಗಾಬಾದ್ ಅನ್ನು ಛತ್ರಪತಿ ಶಿವಾಜಿನಗರವೆಂದೂ ಹಾಗೂ ಉಸ್ಮಾನಾಬಾದ್ ಅನ್ನು ಧಾರಾಶಿವ ಎಂದು ಮರುನಾಮಕರಣಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಹೆಸರುಗಳ ಮರುನಾಮಕಾರಣಕ್ಕೆ ಹಿಂದಿನ ಮಹಾ ವಿಕಾಸ ಅಡಿ (ಎಂವಿಎ) ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ರಾಜಕೀಯ ಬೆಳವಣಿಗೆಯಿಂದಾಗಿ 2022ರ ಜೂನ್ 29ರಂದು ಅಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದರು.
"ಉದ್ಧವ್ ಠಾಕ್ರೆ ಮಾಡಲಿಕ್ಕೆ ಆಗದ ಕೆಲಸವನ್ನು ನಮ್ಮ ಸರ್ಕಾರವು ಸಚಿವ ಸಂಪುಟದ ಪೂರ್ಣ ಬಹುಮತದೊಂದಿಗೆ ಕಾನೂನಾತ್ಮಕವಾಗಿ ಮಾಡಿದೆ' ಎಂದು ಸಿಎಂ ಏಕನಾಥ್ ಸಿಂಧೆ ಮತ್ತು ಉಪಮುಖ್ಯಮಂತ್ರಿ ದೆವೇಂದ್ರ ಡ್ನವಿಸ್ ತಿಳಿಸಿದ್ದಾರೆ.