ನ್ಯೂಸ್

ಆಗಸ್ಟ್ ಮೊದಲ ವಾರ ಎಸ್ಸೆಸ್ಸೆಲ್ಸಿ ಫಲಿತಾಂಶ: ಸುರೇಶ್ ಕುಮಾರ್

arunakunigal

ಬೆಂಗಳೂರು: ವಿದ್ಯಾರ್ಥಿ ಜೀವನ ಪ್ರಮುಖ ಘಟ್ಟ ಎಸ್​ಎಸ್ಎಲ್​ಸಿ. ಕರೊನಾ ಆತಂಕದ ನಡುವೆಯೂ 2019-20ನೇ ಸಾಲಿನ ಹತ್ತನೇ ತರಗತಿಯ ಪರೀಕ್ಷೆ ಬರೆದ 8.5 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಇನ್ನು 20 ದಿನದೊಳಗೆ ಪ್ರಕಟವಾಗಲಿದೆ.

ಎಸ್​ಎಸ್ಎಲ್​ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ರಾಜ್ಯದ ಎಲ್ಲ ಕೇಂದ್ರಗಳಲ್ಲೂ 10 ದಿನದೊಳಗೆ ಪೂರ್ಣಗೊಳ್ಳಲಿದ್ದು, ಆಗಸ್ಟ್ ಮೊದಲ ವಾರ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸೋಮವಾರ ತಿಳಿಸಿದರು.

ಬೆಂಗಳೂರು ನಗರದ ವಿವಿಧೆಡೆಯ ಐದು ಎಸ್ಎಸ್ಎಲ್​ಸಿ ಮೌಲ್ಯಮಾಪನ ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 8.5 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಆಗಸ್ಟ್ ಮೊದಲ ವಾರ ಹೊರಬೀಳಲಿದೆ. ರಾಜ್ಯಾದ್ಯಂತ ಈಗಾಗಲೇ 120 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ 180 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ಮುಗಿಯಲಿದೆ. ಬೆಂಗಳೂರು ಮಹಾನಗರದ 28 ಕೇಂದ್ರಗಳಲ್ಲಿ ಲಾಕ್​ಡೌನ್ ಹಿನ್ನೆಲೆಯಲ್ಲಿ ಮೌಲ್ಯಮಾಪನಕ್ಕೆ ಶೇ.45 ಶಿಕ್ಷಕರು ಹಾಜರಾಗಿದ್ದು, ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಮೌಲ್ಯಮಾಪನ ನಡೆಯುತ್ತಿದೆ ಎಂದು ವಿವರಿಸಿದರು.

ಬೆಂಗಳೂರಿನ ಮಲ್ಲೇಶ್ವರದ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆ, ಎಂಎಲ್ಎ ಪ್ರೌಢಶಾಲೆ, ನಿರ್ಮಲಾರಾಣಿ ಪ್ರೌಢಶಾಲೆ, ರಾಜಾಜಿನಗರದ ಎಸ್​ಜೆಆರ್​ಸಿ ಕಾಲೇಜು, ಸೇಂಟ್ ಆನ್ಸ್ ಪ್ರೌಢಶಾಲೆಗಳ ಮೌಲ್ಯಮಾಪನ ಕೇಂದ್ರಗಳಿಗೆ ಭೇಟಿ ನೀಡಿ ಮೌಲ್ಯಮಾಪನ ಪ್ರಕ್ರಿಯೆ ವೀಕ್ಷಿಸಿದರು.