ನ್ಯೂಸ್

ಒಟಿಟಿಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'; ಖುಷಿ ಬದಲಿಗೆ ಬೇಸರ ವ್ಯಕ್ತಪಡಿಸಿದ ಸಿನಿಪ್ರಿಯರು!

ಮುಂಬೈ: ಬಾಲಿವುಡ್​ ನಟ ರಣವೀರ್​ ಸಿಂಗ್​ ಮತ್ತು ರಾಷ್ಟ್ರಪ್ರಶಸ್ತಿ ವಿಜೇತೆ, ನಟಿ ಆಲಿಯಾ ಭಟ್ ಜೋಡಿಯಾಗಿ ನಟಿಸಿದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರ ಇದೀಗ ಒಟಿಟಿಗೆ ಲಗ್ಗೆಯಿಟ್ಟಿದ್ದು, ಅಮೆಜಾನ್ ಪ್ರೈಮ್​ ವಿಡಿಯೋದಲ್ಲಿ ಬಿಡುಗಡೆಗೊಂಡಿದೆ. ಆದ್ರೆ, ಈ ಬಗ್ಗೆ ಸಿನಿಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರನ್ನು ಮನರಂಜಿಸಿದ ಬಾಲಿವುಡ್​ ಬ್ಲಾಕ್​​ಬಸ್ಟರ್​ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಇದೀಗ ಅಮೆಜಾನ್​ ಪ್ರೈಮ್​ನಲ್ಲಿ ರಿಲೀಸ್​ ಆಗಿರುವುದು ಸಿನಿಪ್ರಿಯರಿಗೆ ಸಂತಸ ತಂದಿದೆ. ಆದ್ರೆ, ಚಿತ್ರವನ್ನು ವೀಕ್ಷಿಸಲು 349 ರೂ. ಪಾವತಿ ಮಾಡಬೇಕು ಎಂಬ ಸಂಗತಿ ಮಾತ್ರ ತೀವ್ರ ಬೇಸರವನ್ನು ಮೂಡಿಸಿದೆ.

ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ರಣವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಧರ್ಮೇಂದ್ರ, ಅಂಜಲಿ ಆನಂದ್​, ಶಬ್ಬಾನ ಅಜ್ಮಿ, ಜಯಾ ಬಚ್ಚನ್, ಚುರ್ನಿ ಗಂಗೂಲಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).