ಸಾಲಿಗ್ರಾಮ: ಮಿರ್ಲೆ ಗ್ರಾಮ ಪಂಚಾಯಿತಿ ಬುಧವಾರ ನಿಗದಿಯಾಗಿದ್ದ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಆರಂಭದಲ್ಲಿ ಗೊಂದಲದ ಗೂಡಾಗಿ ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಸಾಂಗವಾಗಿ ನಡೆಯಿತು.
ಪಂಚಾಯಿತಿಯ 18 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಮಾತಿನ ಚಕಮಕಿ ತಾರಕಕ್ಕೇರಿತು. ಮೊದಲಿಗೆ ಎಸ್‌ಸಿ, ಎಸ್‌ಟಿ ಬಿಡ್‌ದಾರರಿಗೆ ಮೀಸಲಾತಿ ನೀಡದೆ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ದಲಿತ ಮುಖಂಡರು ಗ್ರಾಪಂ ಅಧ್ಯಕ್ಷ ಬಾಲು ಅವರನ್ನು ಪ್ರಶ್ನಿಸಿದರು.
ಇದೇ ವಿಚಾರವಾಗಿ ಸುಮಾರು ಹೊತ್ತು ಚರ್ಚೆ ಬಳಿಕ ಮಾತನಾಡಿದ ಗ್ರಾಪಂ ಅಧ್ಯಕ್ಷ ಬಾಲು, ಎಸ್‌ಸಿ, ಎಸ್‌ಟಿಗೆ ಒಂದಷ್ಟು ಮಳಿಗೆಗಳನ್ನು ಮೀಸಲಿರಿಸಲಾಗಿದೆ. ನೀವು ಕೂಡ ಮುಂಗಡ ಹಣ ಕಟ್ಟಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಂದರು.
ಆಗ ದಲಿತ ಮುಖಂಡರು, ಮೊದಲು ಪಿಡಿಒ ಅವರನ್ನು ಕರೆಯಿಸಿ, ನಿನ್ನೆ ನಾವು ಅರ್ಜಿ ಕೊಡಲು ಹೋದಾಗ ನಮ್ಮ ಅರ್ಜಿಯನ್ನು ಬಿಸಾಡಿದ್ದಾರೆ. ಅದರ ಬಗ್ಗೆ ಉತ್ತರ ನೀಡಬೇಕು. ಅದಕ್ಕಾಗಿ ನಾವು ಮುಂಗಡ ಹಣ ಕಟ್ಟಿಲ್ಲ. ಹಾಗಿದ್ದರೆ ಎಸ್‌ಸಿ, ಎಸ್‌ಟಿ ಮೀಸಲಾತಿ ಕೇಳುವುದೇ ತಪ್ಪಾ ಎಂದು ಪ್ರಶ್ನಿಸಿ ಕಿಡಿಕಾರಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು, ದಲಿತ ಮುಖಂಡರು ಮತ್ತು ಗ್ರಾಪಂ ಸದಸ್ಯರನ್ನು ಸಮಾಧಾನಪಡಿಸಿದರು. ಇದಾಗ ಬಳಿಕ ಹರಾಜು ಪ್ರಕ್ರಿಯೆ ಸಾಂಗವಾಗಿ ನಡೆಯಿತು.
ಬಸ್ ಸ್ಟ್ಯಾಂಡ್ ಹತ್ತಿರ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ 5 ಮಳಿಗೆಗಳಿಗೆ ಹರಾಜು ಪ್ರಕ್ರಿಯೆ ಮೊದಲು ನಡೆಯಿತು. ಮಾಲತಿ (ನಂ.4), ರಾಜೇಶ್ (5), ಪ್ರಶಾಂತ್ (6), ಅಂಬರೀಶ್ (7 ), ಅನಿಲ್ ಕುಮಾರ್ (8) ಮಳಿಗೆಗಳನ್ನು ಬಿಡ್ ಕೂಗಿ ಪಡೆದುಕೊಂಡರು. ಉಳಿದ 12 ಮಳಿಗೆಗಳಿಗೆ ಬಿಡ್‌ದಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ದುಬಾರಿ ಮುಂಗಡ ಹಣ ಮಾಡಿದ್ದಾರೆ ಎಂದು ಬಿಡ್ ಕೂಗಲಿಲ್ಲ. ಮಿರ್ಲೆ ಗ್ರಾಮದಲ್ಲಿ ಇಷ್ಟು ವ್ಯವಹಾರವೇ ಅಂಗಡಿಗಳಲ್ಲಿ ನಡೆಯುವುದಿಲ್ಲ. ಇಷ್ಟೊಂದು ದುಬಾರಿ ಮುಂಗಡ ಹಣ ಎಲ್ಲಿಂದ ಕಟ್ಟಲು ಸಾಧ್ಯ ಎಂದು ಪಿಡಿಒ ಸಂದೇಶ ಅವರನ್ನು ಬಿಡ್‌ದಾರರು ಪ್ರಶ್ನಿಸಿದರು.
ಎಲ್ಲ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದ್ದೇವೆ. ನೀವು ಮುಂಚಿತವಾಗಿ ಪ್ರಶ್ನಿಸಬೇಕಿತ್ತು, ಈಗ ನಾವು ಏನು ಮಾಡಲು ಸಾಧ್ಯವಿಲ್ಲ. ಮಳಿಗೆಗಳು ಬೇಕಿದ್ರೆ ಬಿಡ್ ಕೂಗಿ. ಇಲ್ಲದಿದ್ದರೆ ಹೋಗಿ ಮುಂದಿನ ಆಡಳಿತ ಸಭೆಯಲ್ಲಿ ತೀರ್ಮಾನ ಕೈಗೊಂಡು ನಿಮಗೆ ತಿಳಿಸುತ್ತೇವೆ ಎಂದು ಪಿಡಿಒ ಉತ್ತರಿಸಿದರು. ಇದರಿಂದ ಬಿಡ್‌ದಾರರು ಸಭೆಯಿಂದ ಹೊರನಡೆದರು. ಹಾಗಾಗಿ 12 ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಲಿಲ್ಲ.
ಗ್ರಾಮದ ಅಂಗಡಿಗಳ ವ್ಯವಹಾರದ ಬಗ್ಗೆ ಪಿಡಿಒಗೆ ಅರಿವಿಲ್ಲ ಎಂದರೆ ಚುನಾಯಿತರಾಗಿರುವ ಜನಪ್ರತಿನಿಧಿಗಳು ನೀವು ಏನು ಮಾಡುತ್ತಿದ್ದೀರಿ?. ಯಾವ ಮಳಿಗೆಗಳಿಗೆ ಎಷ್ಟು ಮುಂಗಡ ಹಣ ನಿಗದಿ ಮಾಡಬೇಕು ಎಂದು ಏಕೆ ನೀವು ಹೇಳಲಿಲ್ಲ ? ಎಂದು ಬಿಡ್‌ದಾರರಾದ ರಾಜೀವ್, ರಾಜೇಶ್, ವಸಂತ್, ಪ್ರವೀಣ್, ಬಾಬು, ದೀಪು, ವಾಸು, ರವಿ, ಮೋಹನ್, ಮನು ಇತರರು ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ಉಳಿದ ಗ್ರಾಮ ಪಂಚಾಯಿತಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಬಗ್ಗೆ ಮುಂದಿನ ಸಭೆಯಲ್ಲಿ ಪೂರ್ಣ ತೀರ್ಮಾನ ಕೈಗೊಂಡು ಮುಂದಿನ ದಿನಾಂಕ ನಿಗದಿಪಡಿಸಲಾಗುವುದು. ದಯವಿಟ್ಟು ಸಹಕರಿಸಿ ಎಂದು ಪಿಡಿಒ ಸಂದೀಪ್ ಮನವಿ ಮಾಡಿದರು. ಆಗ ಉಳಿದ ಮಳಿಗೆಗಳ ಹರಾಜು ಮುಂದೂಡಿ ಠೇವಣಿ ಹಣ ವಾಪಸ್ ಮಾಡಿ ಪ್ರಕ್ರಿಯೆ ಮುಕ್ತಾಯಗೊಳಿಸಲಾಯಿತು.
ಸದಸ್ಯರಿಗೆ ತಿಳಿದೇ ಇಲ್ಲ: ಹರಾಜು ಪ್ರಕ್ರಿಯೆಯಲ್ಲಿ ರೂಪಿಸಿರುವ ಕೆಲವು ನಿಯಮಾವಳಿಗಳು ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರಿಗೆ ತಿಳಿದೇ ಇಲ್ಲ. ತೆಂಗಿನ ಮರಗಳ ಹರಾಜು ಸಂಬಂಧ ಸಭೆಯಲ್ಲಿ ತೀರ್ಮಾನವೇ ಆಗಿಲ್ಲ. ಹೇಗೆ ಹರಾಜು ಮಾಡಲು ಸೇರಿಸಿದ್ದೀರಿ ಎಂದು ಅಧ್ಯಕ್ಷ ಬಾಲು ಪಿಡಿಒ ಸಂದೀಪ್ ಅವರನ್ನು ಇದೇ ವೇಳೆ ಪ್ರಶ್ನಿಸಿದರು. ಆಗ ತೆಂಗಿನ ಹರಾಜು ಪ್ರಕ್ರಿಯೆ ಸಹ ಗೊಂದಲವಾಯಿತು. ತೆಂಗಿನ ಮರ ಹರಾಜಿಗೆ ಒಬ್ಬರೇ ಠೇವಣಿ ಹಣ ಕಟ್ಟಿದ್ದು, ಒಬ್ಬರು ಕಟ್ಟಿದರೆ ಹರಾಜು ಕೊಡುವುದಿಲ್ಲ. ಇಬ್ಬರು ಕಟ್ಟಿದರೆ ಮಾತ್ರ ಬಿಡ್ ಕೂಗಲು ಬಿಡುತ್ತೇವೆ ಎಂದು ವಾಪಸ್ ಕಳಿಸಲಾಯಿತು.