ಬಂಗಾರಪೇಟೆ ತಾಲೂಕು ಮಾಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಗಿರಿ ಗ್ರಾಮದ ಚೆಕ್​ ಡ್ಯಾಂನ ಕಟ್ಟೆ ಒಡೆದು ನೀರು ವ್ಯರ್ಥವಾಗಿ ಹರಿಯುತ್ತಿದೆ. 
ನ್ಯೂಸ್

ಚೆಕ್​ ಡ್ಯಾಂ ಕಟ್ಟೆ ಒಡೆದು, ನೀರು ವ್ಯರ್ಥ ಹರಿವು

Kolar

ಬಂಗಾರಪೇಟೆ ಗ್ರಾಮಾಂತರ: ಅತ್ತಿಗಿರಿ ಗ್ರಾಮದ ಬೃಹದಾಕಾರದ ಚೆಕ್​ ಡ್ಯಾಂ ಕಟ್ಟೆ ಒಡೆದು ಸುಮಾರು 10 ದಿನಗಳಿಂದ ನೀರು ವ್ಯರ್ಥವಾಗಿ ಹರಿಯುತ್ತಿದ್ದು ಕಟ್ಟೆಸರಿಪಡಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.

ಬಂಗಾರ್​ಪೇಟೆ ತಾಲೂಕಿನ ಮಾಗೊಂದಿ ಗ್ರಾಪಂ ವ್ಯಾಪ್ತಿಯ ಅತ್ತಿಗಿರಿ ಗ್ರಾಮದ ಬಳಿ ಸುಮಾರು 2 ದಶಕಗಳ ಹಿಂದೆ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೆಕ್​ ಡ್ಯಾಂಗೆ ಹಲವು ಕೆರೆಕುಂಟೆಗಳಿಂದ ನೀರು ಹರಿಯುತ್ತಿದೆ. ಇತ್ತೀಚೆಗೆ ಸುರಿದ ಮಳೆ ಹಾಗೂ ವಾಯುಭಾರ ಕುಸಿತದಿಂದ ಸುರಿದ ಮಳೆಯಿಂದ ಚಕ್​ ಡ್ಯಾಂನಲ್ಲಿ ಯಥೇಚ್ಚವಾಗಿ ನೀರು ಶೇಖರಣೆಯಾಗಿದೆ.

ಚೆಕ್​ಡ್ಯಾಂನ ಕಟ್ಟೆಯು ಶಿಥಿಲಗೊಂಡು ನೀರು ಹೆಚ್ಚಾಗಿ ಶೇಖರಣೆಯಾದ ಪರಿಣಾಮ ಕಳೆದ ಹಲವು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಕೋಡಿಯ ಮೇಲೆ ನೀರು ಹೋಗುತ್ತಿತ್ತು. ಇದೀಗ ಕಟ್ಟೆಯ ಒಂದು ಭಾಗ ಕಿತ್ತು ಹೋಗಿ 10 ದಿನಗಳಿಂದ ಚೆಕ್​ ಡ್ಯಾಂನಿಂದ ನೀರು ವ್ಯರ್ಥವಾಗಿ ರೈತರ ಜಮೀನು ಸೇರಿದಂತೆ ವಿವಿಧ ಕಡೆ ವ್ಯರ್ಥವಾಗಿ ಹರಿಯುತ್ತಿದೆ.

ಚೆಕ್​ ಡ್ಯಾಂ ಅನ್ನು ಸರಿಪಡಿಸುವಂತೆ ಪಂಚಾಯತಿ ಪಿಡಿಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ. ಇದೇ ರೀತಿ ಇನ್ನೂ ಕೆಲವು ದಿನಗಳು ನೀರು ವ್ಯರ್ಥವಾಗಿ ಹರಿದರೆ ಚೆಕ್​ ಡ್ಯಾಂನಲ್ಲಿನ ನೀರು ಖಾಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಆದಷ್ಟು ಬೇಗ ನೀರು ವ್ಯರ್ಥವಾಗದಂತೆ ಚೆಕ್​ ಡ್ಯಾಂ ಅನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

ಚೆಕ್​ ಡ್ಯಾಂ ನಿರ್ಮಿಸಿ ಸುಮಾರು ಎರಡು ದಶಕಗಳೇ ಕಳೆದಿದ್ದು ಡ್ಯಾಂಗೆ ಯಥೇಚ್ಛವಾಗಿ ನೀರು ಹರಿಯುತ್ತಿರುವ ಕಾರಣ ಡ್ಯಾಂನ ಒಂದು ಭಾಗದಲ್ಲಿ ಕಟ್ಟೆ ಒಡೆದು ನೀರು ಹೊರಗಡೆ ಹರಿಯುತ್ತಿದೆ. ಚೆಕ್​ಡ್ಯಾಂನಲ್ಲಿ ನೀರು ಇರುವಾಗ ರಿಪೇರಿ ಕಾರ್ಯ ಸಾಧ್ಯವಿಲ್ಲ. ಆದ್ದರಿಂದ ಚೆಕ್​ ಡ್ಯಾಂನಲ್ಲಿ ನೀರು ಖಾಲಿಯಾದ ಬಳಿಕ ರಿಪೇರಿ ಮಾಡಲಾಗುತ್ತದೆ. | ಕುಪೇಂದ್ರ ಕುಮಾರ್​, ಉಪಾಧ್ಯಕ್ಷ, ಮಾಗೊಂದಿ ಗ್ರಾ.ಪಂ