ಬೆಂಗಳೂರು: ಸರ್ಕಾರಿ ವೈದ್ಯರು, ಸಿಬ್ಬಂದಿ ಕೇಂದ್ರ ಸ್ಥಾನದಲ್ಲೇ ವಾಸ್ತವ್ಯವಿರುವಂತೆ(Attendance at the doctor/staff central position is mandatory) ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸರ್ಕಾರದ ಸೌಲಭ್ಯ ಸೂಕ್ತವಾಗಿ ಉಪಯೋಗಿಸಿಕೊಂಡು ವಾಸ್ತವ್ಯ ಹೂಡಿ ಸಾರ್ವಜನಿಕರ ತುರ್ತು ಸೇವೆಯಲ್ಲಿ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು. ತಪ್ಪಿದಲ್ಲಿ ಶಿಸ್ತುಕ್ರಮದ ಎಚ್ಚರಿಕೆಯನ್ನೂ ನೀಡಿದೆ.
ವೈದ್ಯರು ಹಾಗೂ ವೈದ್ಯ ಸಿಬ್ಬಂದಿಗೆ ಸರ್ಕಾರ ವಸತಿ ಗೃಹ ಕಲ್ಪಿಸಿದೆ. ವಸತಿ ಗೃಹ ಲಭ್ಯವಿಲ್ಲದ ಕಡೆ ಕೇಂದ್ರ ಸ್ಥಾನದಲ್ಲಿ ವಾಸಿಸಲು ಎಚ್‌ಆರ್‌ಎ ಸವಲತ್ತು ನೀಡಲಾಗುತ್ತಿದೆ. ಸರ್ಕಾರ ಒದಗಿಸಿದ ವಸತಿ ಗೃಹಗಳಲ್ಲಿ ವಾಸ್ತವ್ಯವಿರದೇ ಕಟ್ಟಡಗಳು ಶಿಥಿಲಗೊಂಡು ದುರಸ್ತಿ ಮಾಡದಷ್ಟು ಹಾಳಾಗುತ್ತಿವೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿರುತ್ತದೆ. ಅಲ್ಲದೆ ವೈದ್ಯರು ಕೇಂದ್ರ ಸ್ಥಾನದಲ್ಲಿ ಇಲ್ಲದೇ ಇರುವುದರಿಂದ ಸಾರ್ವಜನಿಕರು ಸಕಾಲದಲ್ಲಿ ತುರ್ತು ಸೇವೆ ಪಡೆಯಲು ವಂಚಿತರಾಗುತ್ತಿದ್ದಾರೆ. ಇದರಿಂದ ಅನೇಕ ಸಾವು-ನೋವು ಸಂಭವಿಸುತ್ತಿವೆ. ಕಾರಣ ಸಾರ್ವಜನಿಕರಲ್ಲಿ ಇಲಾಖೆ ಬಗ್ಗೆ ಋಣಾತ್ಮಕ ಭಾವನೆ ಉಂಟಾಗುತ್ತಿದೆ. ಆದ್ದರಿಂದ ವೈದ್ಯರು/ ವೈದ್ಯಕೀಯ ಸಿಬ್ಬಂದಿ ಸರ್ಕಾರ ಕಲ್ಪಿಸಿರುವ ಸೌಕರ್ಯವನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ಕಡ್ಡಾಯವಾಗಿ ವಸತಿ ಗೃಹ/ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡುವುದು ಹಾಗೂ ಸಾರ್ವಜನಿಕರಿಗೆ ತುರ್ತು ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕರ್ತವ್ಯನಿರ್ವಹಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.