ಬೆಂಗಳೂರು: ಎಚ್‌ಎಂಟಿ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಕೆಲ ಮಹತ್ವದ ಹೆಜ್ಜೆಗಳನ್ನು ಇಡಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಕಾರ್ಖಾನೆಯ ಟೂಲ್ಸ್ ಮತ್ತು ಮಶೀನ್ ವಿಭಾಗಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಮಾತನಾಡಿದರು.
ಈ ಕಾರ್ಖಾನೆಯ ಪುನರುದ್ಧಾರದ ಬಗ್ಗೆ ಅನೇಕ ಸಭೆಗಳು ಆಗಿವೆ. ಎಲ್ಲ ಸಾಧಕ-ಭಾದಕಗಳ ಬಗ್ಗೆ ಸಮಾಲೋಚನೆ ನಡೆದಿದೆ. ಕಾರ್ಖಾನೆ ಉಳಿಸುವ ವಿಚಾರದಲ್ಲಿ ನಾನು ರಾಜಿ ಆಗಲ್ಲ, ಅದಕ್ಕೆ ಅಗತ್ಯ ಸಲಹೆ ಪಡೆಯಲು ಒಂದು ಸಲಹಾ ಸಂಸ್ಥೆಯನ್ನು ನೇಮಕ ಮಾಡಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ. ನೀತಿ ಆಯೋಗದ ಜತೆಯೂ ಸಮಾಲೋಚನೆ ನಡೆಸುತ್ತಿದ್ದೇನೆ. ಒಳ್ಳೆಯ ದಿನ ಬರಬಹುದು. ಆಶವಾದಿಗಳಾಗಿ ಇರಿ ಎಂದು ಕಾರ್ಮಿಕರಿಗೆ ಭರವಸೆ ಕೊಟ್ಟರು.
ಮೂರು ನಾಲ್ಕು ತಿಂಗಳು ಅವಕಾಶ ಕೊಡಿ. ಎಲ್ಲ ಹಂತಗಳಲ್ಲಿಯೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಪ್ರಯತ್ನಗಳು ಯಶಸ್ವಿ ಆಗಬಹುದು. ಪ್ರಧಾನ ಮಂತ್ರಿ ಕೈಗಾರಿಕೆಗಳ ಅಭಿವೃದ್ಧಿ ಬಗ್ಗೆ ಸ್ಪಷ್ಟ ದೂರದೃಷ್ಟಿ ಹೊಂದಿದ್ದಾರೆ. ದಯಮಾಡಿ ಕಾಯಿರಿ ಎಂದು ಹೇಳಿದರು.
ಸಚಿವರಿಗೆ ಮನವಿ ಸಲ್ಲಿಸಿದ ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್, ಈ ಕಾರ್ಖಾನೆಯನ್ನು ನಾವು ತಾಯಿಯಂತೆ ಭಾವಿಸುತ್ತಿದ್ದೇವೆ. ನಮ್ಮ ತಾಯಿ ಈಗ ಕಾಯಿಲೆಪೀಡಿತ ಆಗಿದ್ದಾಳೆ. ದಯಮಾಡಿ ಉಳಿಸಿಕೊಡಿ ಎಂದು ಮನವಿ ಮಾಡಿದಾಗ ಸಚಿವರು ಭಾವೋದ್ವೇಗಕ್ಕೆ ಒಳಗಾದರು.
ನಾನು ರಾಜಕೀಯ ಬಂದಿದ್ದೇ ಆಕಸ್ಮಿಕ. ಎಂದೂ ಬರಬೇಕು ಎಂದು ಭಾವಿಸಿದವನಲ್ಲ. ನಾನು ಮೊದಲ ಬಾರಿಗೆ ಸಂಸದ ಆಗಿದ್ದು ಆಕಸ್ಮಿಕ, ಎರಡು ಬಾರಿ ಸಿಎಂ ಆಗಿದ್ದು ಆಕಸ್ಮಿಕ. ಕೇಂದ್ರ ಸಚಿವನಾಗಿರುವುದು ಕೂಡ ಆಕಸ್ಮಿಕ. ನರೇಂದ್ರ ಮೋದಿ ಅವರು ನನಗೆ ಈ ಅವಕಾಶ ನೀಡಿದ್ದಾರೆ. ಜನರ ಸೇವೆ ಮಾಡುವ ಅವಕಾಶ ಕೊಡುವುದಕ್ಕೆ ಇಷ್ಟೆಲ್ಲ ಆಕಸ್ಮಿಕಗಳು ನಡೆದಿವೆ. ನನ್ನ ಪ್ರಯತ್ನ ನಾನು ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಕಾರ್ಖಾನೆಯ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಪ್ರಧಾನ ವ್ಯವಸ್ಥಾಪಕ ಜತಿನ್ ಪ್ರಸಾದ್, ಕಾರ್ಮಿಕರ ಸಂಘದ ಅಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.
ಜಾಲಹಳ್ಳಿಯ ಎಚ್‌ಎಂಟಿ ಟೂಲ್ಸ್ ಮತ್ತು ಮಶೀನ್ ಘಟಕಕ್ಕೆ ಆಗಮಿಸಿದ ಸಚಿವ ಕುಮಾರಸ್ವಾಮಿ ಅವರನ್ನು ರೊಬೋಟಿಕ್ ಯಂತ್ರಗಳೇ ಹೂಗುಚ್ಛ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಅಲ್ಲದೆ, ಆ ಯಂತ್ರಗಳೇ ಸಚಿವರ ಮೇಲೆ ಪುಷ್ಪವೃಷ್ಟಿ ಮಾಡಿದವು.