ನ್ಯೂಸ್

ಬ್ಯಾಂಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ

Mysuru Rural

ಎಚ್.ಡಿ.ಕೋಟೆ: ತಾಲೂಕಿನ ಅಂತರಸಂತೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಗುರುವಾರ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದರು. ಅಲ್ಲದೆ ಕಚೇರಿಯಲ್ಲಿನ ಕಂಪ್ಯೂಟರ್ ಹಾಗೂ ಇನ್ನಿತರ ಉಪಕರಣಗಳನ್ನು ಎಳೆದಾಡಿದರು.

ಬ್ಯಾಂಕ್‌ನ ವ್ಯವಸ್ಥಾಪಕರ ಹಾಗೂ ಸಿಬ್ಬಂದಿ ಕಳೆದ ಏಳೆಂಟು ತಿಂಗಳಿಂದ ರೈತರು ಹಾಗೂ ಗ್ರಾಹಕರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಹಾಗೂ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಸಾಲಕ್ಕೆ ಅರ್ಜಿ ನೀಡಿದರೆ ಅದನ್ನು ಸರಿಯಾಗಿ ಪರಿಶೀಲಿಸದೆ, ನಮ್ಮ ಗಮನಕ್ಕೂ ಬರದಂತೆ ತಿರಸ್ಕರಿಸುತ್ತಿದ್ದಾರೆ. ಅಲ್ಲದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶಿತ ಗ್ರಾಹಕರು ಆರೋಪಿಸಿದರು.

ಬ್ಯಾಂಕ್ ಖಾತೆಗೆ ಬರುವ ಸಬ್ಸಿಡಿ ಹಣವನ್ನು ಖಾತೆದಾರರ ಅನುಮತಿ ಇಲ್ಲದೆ ಬ್ಯಾಂಕ್ ಸಿಬ್ಬಂದಿ ಅವರ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬ್ಯಾಂಕ್‌ನಲ್ಲಿ ನಮ್ಮ ಹಣ ಏನಾಗುತ್ತಿದೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ಬ್ಯಾಂಕ್‌ಗೆ ಬಂದಿದ್ದ ಮಹಿಳೆಯನ್ನು ಬ್ಯಾಂಕ್ ನೌಕರರು ಏಕವಚನದಲ್ಲಿ ಮಾತನಾಡಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾಗಿದೆ. ಪರಿಣಾಮ ಗ್ರಾಹಕರು ಒಟ್ಟಾಗಿ ಸಿಬ್ಬಂದಿ ವಿರುದ್ಧ ತಿರುಗಿಬಿದ್ದಿದ್ದಾರೆ. ಬಳಿಕ ಬ್ಯಾಂಕ್ ವ್ಯವಸ್ಥಾಪಕರು ಮತ್ತು ರೈತರ ಸಭೆ ನಡೆಯಿತು. ರಾಜಿ ಮಾಡಿಕೊಂಡ ಹಿನ್ನೆಲೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.