ಕೋಲಾರದ ಎಂಜಿ ರಸ್ತೆಯಲ್ಲಿ ವಾಣಿಜ್ಯ ಮಳಿಗೆಗಳ ಟ್ರೇಡ್ ಲೈಸನ್ಸ್ ತೆರಿಗೆ ವಸೂಲಿ ವೇಳೆ ಅಧಿಕಾರಿಗಳು, ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತು. 
ನ್ಯೂಸ್

ವಾಣಿಜ್ಯ ಮಳಿಗೆಗಳಿಗೆ ಬೀಗ ಜಡಿಯಲು ಯತ್ನ

ಕಿರುವಾರ ಎಸ್.ಸುದರ್ಶನ್

ಕೋಲಾರ: ನಗರದ ವಾಣಿಜ್ಯ ಮಳಿಗೆಗಳಿಂದ ಟ್ರೇಡ್ ಲೈಸನ್ಸ್ ತೆರಿಗೆ ವಸೂಲಿ ಮಾಡಲು ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳ ಹಾಗೂ ಮಳಿಗೆಗಳ ಮಾಲೀಕರ ನಡುವೆ ಮಾತಿನ ಚಕಮಕಿ ನಡೆದಿದೆ.

ನಗರದ ಎಂಜಿ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ೧೧ಕ್ಕೆ ಕಾರ್ಯಾಚರಣೆ ಶುರುವಾರ ಮಾಡಿದ ನಗರಸಭೆ ಅಧಿಕಾರಿಗಳು ತೆರಿಗೆ ಪಾವತಿ ಮಾಡದ ಅಂಗಡಿಗಳಿಗೆ ಬೀಗ ಹಾಕಿದರು. ಇದರಿಂದ ಅಂಗಡಿ ಮಾಲೀಕರು ತೀವ್ರ ಅಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿದರು. ನಗರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿ ಬಂಗಾರದ ಅಂಗಡಿ, ಬಟ್ಟೆ, ಗಿರವಿ ಸೇರಿದಂತೆ ವಿವಿಧ ರೀತಿಯ ಮಳಿಗೆಗಳಿಳನ್ನು ಸೀಜ್ ಮಾಡಲು ಮುಂದಾದರು.

ಈಗಾಗಲೇ ಮಾಲೀಕರಿಗೆ ೩ ಹಂತದಲ್ಲಿ ನೋಟೀಸ್ ನೀಡಲಾಗಿದೆ. ಆದರೂ ಮಾಲೀಕರು ಸ್ಪಂದಿಸುತ್ತಿಲ್ಲ, ಮೆಡಿಕಲ್ ಮಳಿಗೆಗಳಿಗೆ ವಿನಾಯಿತಿ ನೀಡಲಾಗಿದ್ದು, ಉಳಿದವರು ಪಾವತಿ ಮಾಡಬೇಕು ಎಂದು ಮಂಜುನಾಥ್ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಲೀಕರು ಇಲ್ಲೆ ಯಾಕೆ ಬಂದು ವಸೂಲಿ ಮಾಡುತ್ತೀರ, ನಗರದಲ್ಲಿ ಬೇರೆಲ್ಲೂ ಮಾಡಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಟ್ರೇಡ್ ಲೈಸನ್ಸ್ ಪಾವತಿ ವಿಚಾರವು ಕೋರ್ಟ್ ಹಂತದಲ್ಲಿದೆ. ಏಕಾಏಕಿಯಾಗಿ ಬಂದು ಬೀಗ ಹಾಕಲು ಅಧಿಕಾರ ಕೊಟ್ಟವರು ಯಾರು ಎಂದು ಆಕ್ರೋಶವ್ಯಕ್ತಪಡಿಸಿದರು. ಆಗ ಅಧಿಕಾರಿಗಳು ಹಾಗೂ ಮಾಲೀಕರ ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ಮಾಲೀಕರನ್ನು ಸಮಾಧಾನಪಡಿಸಲು ಅಧಿಕಾರಿಗಳು ಪಟ್ಟ ಪ್ರಯತ್ನ ವಿಫಲವಾಯಿತು. ಆಗ ಆರೋಗ್ಯ ನಿರೀಕ್ಷಕ ಮಂಜುನಾಥ್ ನಗರ ಠಾಣೆ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಕಾರ್ಯಾಚರಣೆ ಮುಂದುವರಿಸಲು ಮುಂದಾದರು. ಆದರೂ ಪಟ್ಟು ಬಿಡದ ಮಾಲೀಕರು ಅಧಿಕಾರಿಗಳ ತಂಡ ಸ್ಥಳದಿಂದ ಕಾಲ್ಕಿತ್ತುವಂತೆ ಮಾಡಿದರು. ಬಂದ ದಾರಿಗೆ ಸುಂಕವಿಲ್ಲದಂತೆ ಅಧಿಕಾರಿಗಳು ಕಚೇರಿಗೆ ವಾಪಸ್ ತೆರಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ನಿರೀಕ್ಷಕ ಮಂಜುನಾಥ್, ನಗರಸಭೆ ವ್ಯಾಪ್ತಿಯಲ್ಲಿ 6 ಸಾವಿರಕ್ಕೂ ಹೆಚ್ಚು ಮಳಿಗೆಗಳಿವೆ. ಈ ಬಾರಿ 45 ಲಕ್ಷ ರೂ. ಟ್ರೇಡ್ ಲೈಸನ್ಸ್ ತೆರಿಗೆ ವಸೂಲಿ ಗುರಿಯಿದೆ ಎಂದರು.
ಈಗಾಗಲೇ 700ಕ್ಕೂ ಹೆಚ್ಚು ಮಳಿಗೆಗಳಿಗೆ ಮೂರು ಹಂತದಲ್ಲಿ ನೋಟಿಸ್ ನೀಡಲಾಗಿದೆ. ತೆರಿಗೆ ಪಾವತಿ ಮಾಡದ ಅಂಗಡಿಗಳಿಗೆ ಭೇಟಿ ನೀಡಿ ವಸೂಲಿ ಮಾಡಲಾಗುತ್ತಿದೆ. ಇದುವರೆಗೂ ಕೇವಲ ೨೨೦ ಮಳಿಗೆಗಳವರು ತೆರಿಗೆ ಪಾವತಿ ಮಾಡಿದ್ದು, ಇದರಿಂದಾಗಿ ಕೇವಲ 4,75,000 ರೂ. ಮಾತ್ರ ವಸೂಲಿಯಾಗಿದೆ ಎಂದು ತಿಳಿಸಿದರು.