ನ್ಯೂಸ್

ಸಂಸದ ಡಿ.ಕೆ.ಸುರೇಶ್ ಮನೆಗೆ ಮುತ್ತಿಗೆಗೆ ಯತ್ನ: ಕಾರ್ಯಕರ್ತರನ್ನು ವಶಕ್ಕೆ ಪಡೆದ ಖಾಕಿ

ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಅವರು, ಕೇಂದ್ರ ಬಜೆಟ್ ಬಗ್ಗೆ ಮಾತನಾಡುವಾಗ ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಕುರಿತು ನೀಡಿದ್ದ ಹೇಳಿಕೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾನುವಾರ ಡಿ.ಕೆ.ಸುರೇಶ್ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದರು.

ಯುವ ಮೋರ್ಚಾ ಕಾರ್ಯಕರ್ತರು ಸದಾಶಿವನಗರದಲ್ಲಿರುವ ಸಂಸದ ಡಿ.ಕೆ.ಸುರೇಶ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕೆಲ ಕಾಲ ವಾಗ್ವಾದ ನಡೆದು ನೂಕಾಟ ತಳ್ಳಾಟ ನಡೆಯಿತು.

ಮುನ್ನೆಚ್ಚರಿಕಾ ಕ್ರಮವಾಗಿ ಸದಾಶಿವನಗರ ಠಾಣೆ ಪೊಲೀಸರು ಬಿಜೆಪಿ ಯುವ ಮೋರ್ಚಾ ಮುಖಂಡರಾದ ಅನಿಲ್ ಶೆಟ್ಟಿ, ಪ್ರದೀಪ್, ಪ್ರಶಾಂತ್, ಸಂದೀಪ್ ಸೇರಿ ಸುಮಾರು ೪೦ ಮಂದಿಯನ್ನು ವಶಕ್ಕೆ ಪಡೆದು ಕರೆದೊಯ್ದರು. ಬಳಿಕ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

ಮೂರು ಕಡೆ ಪ್ರತಿಭಟನೆ
ಯುವ ಮೋರ್ಚಾ ಕಾರ್ಯಕರ್ತರು ಮೂರು ತಂಡಗಳಾಗಿ ಮೂರು ಕಡೆ ಪ್ರತಿಭಟನೆ ನಡೆಸಿದರು. ಅರಮನೆ ರಸ್ತೆಯ ಗಾಯತ್ರಿ ವಿಹಾರ ದ್ವಾರ, ಬಳ್ಳಾರಿ ರಸ್ತೆ ಹಾಗೂ ಡಿ.ಕೆ.ಸುರೇಶ್ ನಿವಾಸದ ಬಳಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅರಮನೆ ರಸ್ತೆ ದಾಟಿಕೊಂಡು ಡಿ.ಕೆ.ಸುರೇಶ್ ಅವರ ನಿವಾದತ್ತ ಮುನ್ನುಗಲು ಮುಂದಾದ ಪ್ರತಿಭಟನಾಕಾರರ ಎರಡು ತಂಡಗಳನ್ನು ಪೊಲೀಸರು ಮಾರ್ಗ ಮಧ್ಯೆಯೇ ತಡೆದರು. ಇದೇ ವೇಳೆ ಡಿ.ಕೆ.ಸುರೇಶ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಮತ್ತೊಂದು ತಂಡವನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪ್ರತಿಭಟನಾಕಾರರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಈ ವೇಳೆ ಕೆಲ ಪೊಲೀಸರು ಮತ್ತು ಪ್ರತಿಭಟನಾಕರರ ನಡುವೆ ವಾಗ್ವಾದವೇ ನಡೆಯಿತು.

ಪೊಲೀಸರಿಂದ ಹಲ್ಲೆ ಆರೋಪ:
ಡಿ.ಕೆ.ಸುರೇಶ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಮೋರ್ಚಾ ಕಾರ್ಯಕರ್ತ ಪ್ರಶಾಂತ್ ಮೇಲೆ ಪೊಲೀಸರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಡಿ.ಕೆ.ಸುರೇಶ್ ನಿವಾಸಕ್ಕೆ ಮುತ್ತಿಗೆ ಹಾಕಲು ಓಡಾಡುತ್ತಿದ್ದ ಪ್ರಶಾಂತ್‌ನನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ತಳ್ಳಾಟ-ನೂಕಾಟ ನಡೆಯಿತು. ಈ ವೇಳೆ ಪೊಲೀಸರು ಕಾರ್ಯಕರ್ತ ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂಚಾರ ದಟ್ಟಣೆ:
ಕಾರ್ಯಕರ್ತರು ಅರಮನೆ ರಸ್ತೆಯಲ್ಲಿ ಏಕಾಏಕಿ ಪ್ರತಿಭಟನೆ ಮಾಡಿದ ಪರಿಣಾಮ ವಾಹನ ಸಂಚಾರಕ್ಕೆ ಕೆಲ ಕಾಲ ಅಡಚಣೆಯಾಗಿ ಸಂಚಾರ ದಟ್ಟಣೆ ಉಂಟಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರು ಹಾಗೂ ವಿಮಾನ ನಿಲ್ದಾಣ ಕಡೆಯಿಂದ ಬರುವ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಎಂಟಸಿ ಬಸ್‌ಗೆ ಹತ್ತಿಸಿಕೊಂಡು ಕರೆದೊಯ್ದರು.