ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲದಿದ್ದರೂ ಅವರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಹಿಂದುಳಿದ ವರ್ಗಗಳ ಒಕ್ಕೂಟ, ಜನಪರ ಸಂಘಟನೆಗಳ ಒಕ್ಕೂಟ ಹಾಗೂ ಶೋಷಿತ ಸಮುದಾಯಗಳ ಒಕ್ಕೂಟದ ಪ್ರಮುಖರು ಗುರುವಾರ ಡಿಸಿ ಕಚೇರಿ ಎದುರು ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.
ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ಪಾದಯಾತ್ರೆ ನಡೆಸಿ ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಸಚಿವರು ರಾಜೀನಾಮೆ ನೀಡಿ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಮುಡಾ ಹಗರಣದ ತನಿಖೆ ನಡೆಸಲು ಸಿದ್ದರಾಮಯ್ಯ ಅವರೇ ನಿಯೋಗ ರಚಿಸಿದ್ದಾರೆ. ಹೀಗಿದ್ದರೂ ಅವರನ್ನು ಖಳನಾಯಕರಂತೆ ಬಿಂಬಿಸಲಾಗುತ್ತಿದೆ. ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರ ನಿಲ್ಲಬೇಕು ಎಂದು ಎಚ್ಚರಿಸಿದರು.
ರಾಜ್ಯಮಟ್ಟದಲ್ಲಿ ಶೋಷಿತರು ಹಾಗೂ ಅಹಿಂದ ವರ್ಗದವರ ಸಮಾವೇಶವನ್ನು ಶೀಘ್ರವೇ ಹಮ್ಮಿಕೊಳ್ಳಲಾಗುವುದು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೋರಾಟ ವಿಸ್ತರಿಸಲಾಗುವುದು. ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಪ್ರತಿಭಟಿಸಲಾಗುವುದು ಎಂದರು.
ಅಹಿಂದ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಇಕ್ಕೇರಿ ರಮೇಶ್, ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಪಿ.ಶೇಷಾದ್ರಿ, ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ರಂಗನಾಥ್, ಪ್ರಮುಖರಾದ ಎಸ್.ಬಿ.ಅಶೋಕ್ ಕುಮಾರ್, ಪಿ.ಬಾಲಪ್ಪ, ಎನ್.ವಸಂತಕುಮಾರ್, ಮಮತಾ ಸಿಂಗ್ ಇತರರಿದ್ದರು.