ತೀರ್ಥಹಳ್ಳಿ ತಾಲೂಕಿನ ಆಲಗೇರಿ ಗ್ರಾಮದ ರೈತರ ಭೂಮಿ ಕಬಳಿಸಲು ಮುಂದಾಗಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತ ಮುಖಂಡರು ತಹಸೀಲ್ದಾರ್ ಎಸ್.ರಂಜಿತ್ ಅವರಿಗೆ ಮನವಿ ಸಲ್ಲಿಸಿದರು. ನೆಂಪೆ ದೇವರಾಜ್, ರಾಜೇಂದ್ರ, ಸುಬ್ರಹ್ಮಣ್ಯ ಭಟ್, ಮಂಜುನಾಥ್, ಪ್ರಭಾಕರ್, ರಾಘವೇಂದ್ರ ಇತರರಿದ್ದರು.  
ನ್ಯೂಸ್

ಭೀಮನಕಟ್ಟೆ ಮಠದಿಂದ ಭೂಮಿ ಕಬಳಿಕೆ ಯತ್ನ

ತೀರ್ಥಹಳ್ಳಿ: ಆಲಗೇರಿ ಗ್ರಾಮದ ಸರ್ವೇ ನಂ.8ರಲ್ಲಿ ಅನಾದಿಕಾಲದಿಂದ ಇರುವ ರೈತರ ಭೂಮಿ ಕಬಳಿಸಲು ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠ ಮತ್ತಿತರರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ರೈತ ಮುಖಂಡರು ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನ ಹೆಗ್ಗೋಡು ಗ್ರಾಪಂ ವ್ಯಾಪ್ತಿಯ ಆಲಗೇರಿ ಗ್ರಾಮದ ಸರ್ವೇ ನಂ.8ರಲ್ಲಿ ಇರುವ 6.35 ಗುಂಟೆ ಭೂಮಿ ಭೂ ಸುಧಾರಣೆ ಅನ್ವಯ ರೈತರಿಗೆ ಮಂಜೂರಾಗಿದೆ. ದಾಖಲೆ ತಿದ್ದುವ ಅಧಿಕಾರಿ ವರ್ಗದ ಬೆಂಬಲದಿಂದ ಮೇಲ್ಕಂಡ ಭೂಮಿಯಲ್ಲಿ ಅನಾದಿಕಾಲದಿಂದ ಬದುಕಿರುವ ರೈತರ ಭೂಮಿ ಮತ್ತು ಮನೆಯನ್ನು ಕಬಳಿಸುವ ಸಂಚು ನಡೆಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರೈತ ಮುಖಂಡ ನೆಂಪೆ ದೇವರಾಜ್ ಆಗ್ರಹಿಸಿದರು.

ಭೂಮಿ ರೈತರ ಸ್ವಾಧೀನದಲ್ಲೇ ಇದೆ. ತಾನು ಮಠದ ಏಜೆಂಟ್, ಜಿಪಿಎ ಹೋಲ್ಡರ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ತಾಲೂಕು ಕಚೇರಿಯಲ್ಲಿ ಕುಳಿತು ಕಾನೂನು ಬಾಹಿರವಾಗಿ ಈ ಭೂಮಿಗೆ ಸಂಬಂಧಿಸಿದ ಪೂರ್ಣ ನಕಲಿ ದಾಖಲೆಯನ್ನು ಸೃಷ್ಟಿಸಿಕೊಂಡು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಭ್ರಷ್ಟ ಅಧಿಕಾರಿಗಳು ಅವಕಾಶವಾದಿಗಳೊಂದಿಗೆ ಸೇರಿ ರೈತರನ್ನು ಹೇಗೆ ವಂಚಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ರೈತರ ಬದುಕಿನೊಂದಿಗೆ ಚೆಲ್ಲಾಟವಾಡುವ ಇಂಥವರ ವಿರುದ್ಧ ರೈತರು ಸದಾ ಎಚ್ಚರವಹಿಸಬೇಕು. ದಾಖಲೆ ಸರಿಪಡಿಸಿಕೊಳ್ಳದೆ ಮೈಮರೆತರೆ ಭೂ ಸುಧಾರಣೆ ಅನ್ವಯ ದೊರೆತ ಭೂಮಿ ಮಾತ್ರವಲ್ಲದೆ ಬಗರ್‌ಹುಕುಂ ಮಂಜೂರಾತಿ ಆದ ಭೂಮಿಯೂ ಕೈತಪ್ಪುವ ಆತಂಕವಿದೆ ಎಂದರು.

ರೈತ ಮುಖಂಡ ಕಂಬ್ಳಿಗೆರೆ ರಾಜೇಂದ್ರ ಮಾತನಾಡಿ, ಭೀಮನಕಟ್ಟೆ ಮಠದವರು ಆಲಗೇರಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಮಗ್ರ ತನಿಖೆ ನಡೆಸುವ ಮೂಲಕ ಮಠದ ಸ್ವಾಮೀಜಿ ಸಹಿತ ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಸುಬ್ರಹ್ಮಣ್ಯ ಭಟ್, ಕೆಸ್ತೂರು ಮಂಜುನಾಥ್, ಬಾಳೇಹಳ್ಳಿ ಪ್ರಭಾಕರ್, ತಲುಬಿ ರಾಘವೇಂದ್ರ, ಕೋಡ್ಲು ವೆಂಕಟೇಶ್, ಹೊರಬೈಲು ರಾಮಕೃಷ್ಣ, ಪ್ರಕಾಶ್, ಅಭಿ, ರಂಗಪ್ಪ ಗೌಡ, ಕೃಷ್ಣಮೂರ್ತಿ ಇದ್ದರು.