ಬೆಂಗಳೂರು: ಆರ್ಥಿಕ ದುಃಸ್ಥಿತಿ ಮುಚ್ಚಿಕೊಳ್ಳಲು ರಾಜ್ಯ ಸರ್ಕಾರ ಹೊಸ, ಹೊಸ ವಿಚಾರಗಳನ್ನು ಮುನ್ನೆಲೆಗೆ ತರುವ ಹುನ್ನಾರ ಹೂಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ರೈಲ್ವೆ ಯೋಜನೆಗಳಿಗೆ ಯುಪಿಎ ಅವಧಿಯಲ್ಲಿ 5 ಸಾವಿರ ಕೋಟಿ ರೂ. ಘೋಷಿಸಿದ್ದರೂ ಬಿಡುಗಡೆಯಾಗಲಿಲ್ಲ. ನಮ್ಮ ಅವಧಿಯಲ್ಲಿ ಪ್ರತಿ ವರ್ಷಕ್ಕಿಂತ ಹೆಚ್ಚು ಹಣ ರಾಜ್ಯಕ್ಕೆ ಬಂದಿದೆ. ರಾಜ್ಯ ಸರ್ಕಾರ ತನ್ನ ಲೋಪ ಮುಚ್ಚಿಕೊಳ್ಳಲು ಎಂಪಿಗಳ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಅಭಿವೃದ್ಧಿ, ಆಡಳಿತ ಸೇರಿ ಸರ್ಕಾರದ ಎದುರು ಸಾಕಷ್ಟು ಸಮಸ್ಯೆಗಳಿವೆ. ಸಾಕಷ್ಟು ಮಳೆಯಾಗಿದೆ ಅದಕ್ಕೆ ಪರಿಹಾರ ಕೊಡುವುದನ್ನು ಬಿಟ್ಟು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಬಹಿರಂಗ ವೇದಿಕೆಯಲ್ಲಿ ಹೇಳಿಕೆ ನೀಡಿರುವುದು ಗಮನಿಸಿದರೆ ಕಾಂಗ್ರೆಸ್ ಹೈಕಮಾಂಡ್ ಎಲ್ಲಿದೆ ?. ದೆಹಲಿಯಲ್ಲಿದೆಯಾ ? ಅಥವಾ ಸಿಎಂ ಕುಟುಂಬದವರ ಸುತ್ತ ಇದೆಯಾ ? ಎಂಬ ಪ್ರಶ್ನೆಗಳು ಕಾಡುತ್ತವೆ ಎಂದು ಛೇಡಿಸಿದರು.
ಆರ್‌ಎಸ್‌ಎಸ್ ವಿರುದ್ದವೂ ರಾಜ್ಯ ಸರ್ಕಾರ ಮೂಲ ಸಂವಿಧಾನದ ವಿರುದ್ದ ಆದೇಶ ಹೊರಡಿಸಿದ್ದು, ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ. ವಾಕ್‌ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ, ಧಾರ್ಮಿಕ ಸ್ವಾತಂತ್ರ್ಯ ಇರುವ ಸ್ವತಂತ್ರ ದೇಶ ನಮ್ಮದು. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಧೋರಣೆ ನಡೆಯದು ಎಂದು ಬೊಮ್ಮಾಯಿ ಎಚ್ಚರಿಸಿದರು.
ಆರ್‌ಎಸ್‌ಎಸ್‌ನಂತೆ ಬೇರೆ ಸಂಘಟನೆಗಳು ಪಥಸಂಚಲನ ಮಾಡುವುದಿದ್ದರೆ ಮಾಡಲಿ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ವಿಷಯದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸರಿಯಾದ ತೀರ್ಮಾನ ಮಾಡಿದೆ ಎಂದು ಹೇಳಿದರು.
ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ದೊಣ್ಣೆಗಳನ್ನು ಬಳಸುವ ಬಗ್ಗೆ ಸಚಿವರು ಆಕ್ಷೇಪ ಎತ್ತಿದ್ದು, ಪಥ ಸಂಚಲನದಿಂದ ಯಾರಿಗಾದರೂ ತೊಂದರೆಯಾಗಿದೆಯಾ ?. ಸರ್ಕಾರ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್ ದೊಣ್ಣೆ ಬಗ್ಗೆ ಮಾತ್ರ ಮಾತನಾಡುತ್ತಾರೆ. ಮೊಹರಂನಲ್ಲಿ ಕಬ್ಬಿಣದ ಚಾಟಿಯಿಂದ ಹೊಡೆದುಕೊಳ್ಳುತ್ತಾರೆ. ಇದು ಸರಿಯೆ ? ಜಗತ್ತಿನಲ್ಲಿ ಎಲ್ಲರಿಗೂ ಅವರದೇ ಆದ ನಂಬಿಕೆಗಳಿವೆ. ಸರ್ಕಾರ ಅವುಗಳಿಗೆ ಧಕ್ಕೆ ತರುವ ಕೆಲಸ ಮಾಡುವುದು ಸರಿಯಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.