ನ್ಯೂಸ್

ಎನ್‌ಸಿಐಬಿ ಹೆಸರಿನಲ್ಲಿ ಶಿಫಾರಸ್ಸು ಪತ್ರ ಕಳುಹಿಸಿ ವಂಚಿಸಲು ಯತ್ನ

ಬೆಂಗಳೂರು: ನ್ಯಾಷನಲ್ ಕ್ರೈಂ ಇನ್ವೇಸ್ಟೇಗೇಷನ್ ಬ್ಯೂರೋ(ಎನ್‌ಸಿಐಬಿ) ಹೆಸರಿನಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಶಿಫಾರಸ್ಸು ಪತ್ರ ಕಳುಹಿಸಿ ವಂಚಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಉತ್ತರ ಪ್ರದೇಶ ಮೂಲದ ಸುರೇಶ್ ಕುಮಾರ್ ಶುಕ್ಲಾ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜೂನ್ ೨೬ರಂದು ನ್ಯಾಷನಲ್ ಕೈಂ ಇನ್ವೆಸ್ಟಿಗೇಷನ್ ಬ್ಯೂರೋ ಹೆಸರಿನ ಪತ್ರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದು, ತಾವು ಕಳುಹಿಸುವ ಇಬ್ಬರು ಯುವಕರನ್ನು ಕ್ರೈಂ ಇನ್ಫಾರ್ಮೇಷನ್ ಆಫೀಸರ್ ಆಗಿ ನೇಮಿಸಲಾಗಿದೆ. ಅವರಿಗೆ ಅಗತ್ಯ ಸಹಕಾರ ನೀಡುವಂತೆ ಶಿಫಾರಸು ಮಾಡಲಾಗಿತ್ತು. ಈ ಪತ್ರವನ್ನು ಪರಿಶೀಲಿಸಿದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಅದರ ಖಚಿತತೆ ಕುರಿತು ತನಿಖೆ ನಡೆಸುವಂತೆ ಸಿಸಿಬಿ ಪೊಲೀಸರಿಗೆ ಸೂಚಿಸಿದ್ದರು.
ಸಿಸಿಬಿ ಪೊಲೀಸರ ತನಿಖೆ ವೇಳೆ, ಈ ನಕಲಿ ಸಂಸ್ಥೆಯ ಕಚೇರಿ ಉತ್ತರಪ್ರದೇಶ ರಾಜ್ಯದ ಗೋಂಡಾ ಜಿಲ್ಲೆಯಲ್ಲಿದ್ದು, ಸುರೇಶ್ ಕುಮಾರ್ ಶುಕ್ಲಾ ಎಂಬಾತ ಅದರ ಸಿಇಒ ಎಂಬುದು ಪತ್ತೆಯಾಗಿತ್ತು. ಹೆಚ್ಚಿನ ತನಿಖೆ ಕೈಗೊಂಡ ಸಿಸಿಬಿ ಪೊಲೀಸರಿಗೆ ಎನ್‌ಸಿಐಬಿ ಹೆಸರಿನ ಕಚೇರಿ ೨೦೧೨ರಲ್ಲಿ ಮೈಕ್ರೋ ಸ್ಮಾಲ್ ಆ್ಯಂಡ್ ಮೀಡಿಯಂ ಎಂಟಪ್ರೈಸಸ್ ಹೆಸರಿನಲ್ಲಿ ಸಂಸ್ಥೆ ನೋಂದಣಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ, ಈ ಸಂಸ್ಥೆ ಪಡೆದಿದ್ದ ಇಂಟರ್ನಲ್ ಆರ್ಗನೈಸೇಷನ್ ಫಾರ್ ಸ್ಟಾೃಂಡರ್ಡೈಸೇಷನ್ (ಐಎಸ್‌ಒ) ಪ್ರಮಾಣ ಪತ್ರದ ಅವಧಿ ೨೦೧೫ರಲ್ಲಿ ಮುಕ್ತಾಯಗೊಂಡಿದ್ದು, ೨೦೨೫ರವರೆಗೆ ಹೊಂದಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿರುವ ಸಂಗತಿಯೂ ವೇಳೆ ಬೆಳಕಿಗೆ ಬಂದಿದೆ. ಸದ್ಯ ಸಿಸಿಬಿ ಅಧಿಕಾರಿಗಳು ನೀಡಿದ ದೂರಿನನ್ವಯ ನಕಲಿ ಐಎಸ್‌ಒ ಸೃಷ್ಟಿಸಿ ತನಿಖಾ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸಿರುವ ಆರೋಪದಡಿ ಸಂಸ್ಥೆ ಹಾಗೂ ಅದರ ಸಿಇಓ ಸುರೇಶ್ ಕುಮಾರ್ ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಲೋಗೋ ಬಳಕೆ:
ರಾಷ್ಟ್ರೀಯ ಕ್ರೈಂ ರೆಕಾರ್ಡ್ ಬ್ಯೂರೋ(ಎನ್‌ಸಿಆರ್‌ಬಿ) ಮಾದರಿಯಲ್ಲೇ ಆರೋಪಿಗಳು ನ್ಯಾಷನಲ್ ಕೈಂ ಇನ್ವೆಸ್ಟಿಗೇಷನ್ ಬ್ಯೂರೋ(ಎನ್‌ಸಿಐಬಿ) ಸೃಷ್ಟಿಸಿದ್ದಾರೆ. ಎನ್‌ಸಿಆರ್‌ಬಿಯ ಲೋಗೋ ಹಾಗೂ ಇತರೆ ಗುರುತುಗಳನ್ನು ನಕಲಿ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.