ಶಿವಮೊಗ್ಗ: ಶರೀರವನ್ನು ಮಾಧ್ಯಮವನ್ನಾಗಿರಿಸಿಕೊಂಡು ಧರ್ಮ ಸಾಧನೆ ಮಾಡಬೇಕಿರುವುದರಿಂದ ಶರೀರದ ಸ್ವಾಸ್ಥೃ ಅವಶ್ಯ ಎಂದು ಹುಬ್ಬಳ್ಳಿ ಮೂರು ಸಾವಿರ ಮಠ ಮಹಾಸಂಸ್ಥಾನದ ಶ್ರೀ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಶಿವಗಂಗಾ ಯೋಗ ಕೇಂದ್ರದಲ್ಲಿ ಗುರುಪೂರ್ಣಿಮೆ ಹಾಗೂ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರಿಗೆ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಲಿಂಗ ಪೂಜೆ ಸಲ್ಲಿಸುವಾಗ ಒಮ್ಮೊಮ್ಮೆ ಪಂಚಾಮೃತ ಅಭಿಷೇಕವಾಗಿರುತ್ತದೆ. ಆದರೆ ಅಲಂಕಾರ ಮಾಡಲು ಆಗುವುದಿಲ್ಲ. ಹೀಗಾಗಿ ಪೂಜಾಫಲ ಪ್ರಾಪ್ತಿಯಾಗಬೇಕಾದರೆ ಮೊದಲು ದೇಹ ಪೂಜೆ ಪೂರ್ತಿಯಾಗಬೇಕು ಎಂದರು.
ಹೊರಾಂಗಣ ಕ್ರೀಡೆಗಳು ದೇಹವನ್ನು ದಣಿಸುತ್ತವೆ ಆದರೆ ಮನಸ್ಸಿನ ಏಕಾಗ್ರತೆ ಸಾಧ್ಯವಾಗುವುದಿಲ್ಲ. ಯೋಗ ಶರೀರಕ್ಕೆ ದಣಿವನ್ನು ನೀಡದೆ ಮನಸ್ಸನ್ನು ಚೈತನ್ಯಗೊಳಿಸಿ ಆಧ್ಯಾತ್ಮದ ಲೋಕಕ್ಕೆ ನಮ್ಮನ್ನು ತಲುಪಿಸುತ್ತದೆ. ಚಿತ್ತದ ಹಲವಾರು ವೃತ್ತಿಗಳನ್ನು ನಿಲ್ಲಿಸುವ ಯೋಗ ಮನಸ್ಸನ್ನು ಸಮಾಧಿ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಬೆಕ್ಕಿನ ಕಲ್ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿ.ವಿ.ರುದ್ರಾರಾಧ್ಯ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ, ಪ್ರಮುಖರಾದ ಎಸ್.ವೈ.ಅರುಣಾದೇವಿ, ಜಿ.ವಿಜಯಕುಮಾರ್ ಮುಂತಾದವರಿದ್ದರು.