ನವದೆಹಲಿ: ದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರು ಸ್ಫೋಟ(Delhi car blast) ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿಕೋರ ಡಾ. ಉಮರ್ ಉನ್ ನಬಿ ಹಳೆ ದೆಹಲಿಯ ಮಸೀದಿಯೊಳಗೆ ಪ್ರವೇಶಿಸಿ ಅಲ್ಲಿಂದ ನಿರ್ಗಮಿಸುತ್ತಿರುವುದನ್ನು ತೋರಿಸುವ ಹೊಸ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಹೊರ ಬಂದಿವೆ.
ದಾಳಿಗೂ ಮುನ್ನ ಮಸೀದಿ ಪ್ರವೇಶ
ವೈದ್ಯ ಉಮರ್, ತುರ್ಕಮನ್ ಗೇಟ್ ಎದುರಿನ ರಾಮಲೀಲಾ ಮೈದಾನದ ಬಳಿಯ ಫೈಜ್-ಎ-ಇಲಾಹಿ ಮಸೀದಿಗೆ ಪ್ರವೇಶಿಸಿ ಅಲ್ಲಿಂದ ಹೊರಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸೋಮವಾರ ಮಧ್ಯಾಹ್ನ 2.30ಕ್ಕೆ ಕೆಂಪು ಕೋಟೆಯ ಕಡೆಗೆ ತೆರಳುವ ಮೊದಲು ಅವರು 10 ನಿಮಿಷಗಳಿಗೂ ಹೆಚ್ಚು ಕಾಲ ಅಲ್ಲಿಯೇ ಇದ್ದರು. 19 ಸೆಕೆಂಡುಗಳ ವೀಡಿಯೊದಲ್ಲಿ ಡಾ. ಉಮರ್ ಮಸೀದಿ ಬಳಿಯ ಅಸಫ್ ಅಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಕೆಲವು ಗಂಟೆಗಳ ನಂತರ, ಅವನು ತನ್ನ ಹುಂಡೈ i20 ಕಾರನ್ನು ನಗರದ ಅತ್ಯಂತ ಜನನಿಬಿಡ ಪ್ರವಾಸಿ ತಾಣಗಳಲ್ಲಿ ಒಂದಾದ ಕೆಂಪುಕೋಟೆ ಬಳಿ ಸ್ಫೋಟಿಸಿದ್ದಾನೆ. ಜೈಶ್-ಎ-ಮೊಹಮ್ಮದ್ (ಜೆಇಎಂ)ಗೆ ಸಂಬಂಧಿಸಿದ ಫರಿದಾಬಾದ್ ಭಯೋತ್ಪಾದಕ ಘಟಕದ ತನ್ನ ಸಹಚರರನ್ನು ಹಿಂದಿನ ದಿನ ಬಂಧಿಸಿದ ಬಳಿಕ, ಅವನು ಆತುರದಿಂದ ವರ್ತಿಸಿದ್ದಾನೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ ಎಂದು ವರದಿಯೊಂದು ಉಲ್ಲೇಖಿಸಿದೆ.
ಕಾರು ಚಲಾಯಿಸುತ್ತಿದ್ದ ಡಾ. ಉಮರ್
ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಡಾ. ಉಮರ್ ಉನ್ ನಬಿ ಎನ್ನುವುದು ವಿಧಿವಿಜ್ಞಾನ ಪರೀಕ್ಷೆಯ ವರದಿ ದೃಢಪಡಿಸಿವೆ ಎಂದು ಗುರುವಾರ( ನ.13) ವರದಿಯಾಗಿದೆ. ಡಾ. ಉಮರ್ ಅವರ ತಾಯಿಯ ಡಿಎನ್ಎ ಮಾದರಿಗಳು, ಸ್ಫೋಟದ ಸ್ಥಳದಿಂದ ವಶಪಡಿಸಿಕೊಂಡ ಮೂಳೆಗಳು ಮತ್ತು ಹಲ್ಲುಗಳಿಂದ ಹೊರತೆಗೆಯಲಾದ ಡಿಎನ್ಎ ಮಾದರಿಗಳೊಂದಿಗೆ ಹೊಲಿಕೆಯಾದ ಬಳಿಕ ಈ ವಿಷಯ ದೃಢಪಟ್ಟಿದ್ದು, ಈ ಮಾದರಿಗಳನ್ನು ಏಮ್ಸ್ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ವಿಶ್ಲೇಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್).