Smit Machchhar pilot: ದುಬೈನಿಂದ ತೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಒಮಾನಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ, ಭಾರತೀಯ ಮೂಲದ ಮುಖ್ಯ ಪೈಲಟ್ ಸ್ಮಿತ್ ಮಚ್ಛಾರ್ ಅವರ ಮೇಲೆ ಕೊಡಲಿಯಿಂದ ಏಕಾಏಕಿ ದಾಳಿ ಮಾಡಿ ವಿಮಾನ ಪತನಗೊಳಿಸಲು ಯತ್ನಿಸಿದ್ದ ಘಟನೆ ದೇಶವನ್ನೆ ಬೆಚ್ಚಿಬೀಳಿಸಿತ್ತು.
ಇನ್ನು, ಈ ಗೊಂದಲದಲ್ಲಿ ವಿಮಾನ ಕೇವಲ 30 ಸೆಕೆಂಡುಗಳಲ್ಲಿ 14,000 ಅಡಿ ಕೆಳಗೆ ಬಿದ್ದು, ಒಳಗಿದ್ದ 170ಕ್ಕೂ ಹೆಚ್ಚು ಪ್ರಯಾಣಿಕರು ಆತಂಕಗೊಂಡಿದ್ದರು.
ಗಾಯಗೊಂಡಿದ್ದರೂ ಎದೆಗುಂದದ ಪೈಲಟ್ ಸ್ಮಿತ್ ಮಚ್ಛಾರ್ ಕಾಕ್‌ಪಿಟ್ ಬಾಗಿಲು ತೆರೆದರು. ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಗೆ ನುಗ್ಗಿ ದಾಳಿಕೋರ ಸಹ-ಪೈಲಟ್‌ನನ್ನು ಕಟ್ಟಿಹಾಕಿದರು. ಅಷ್ಟರಲ್ಲೇ, ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕ ಯಾನಿವ್ ಹಯೂನ್ ಸ್ವಲ್ಪ ಸಮಯ ವಿಮಾನದ ನಿಯಂತ್ರಣ ಕೈಗೆ ತೆಗೆದುಕೊಂಡು ದುರಂತ ತಪ್ಪಿಸಿದರು.
ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಫಿಜಿಯ ಹೆನ್ಸನ್ ಸ್ಟೀವನ್ ಮತ್ತು ದಕ್ಷಿಣ ಆಫ್ರಿಕಾದ ರೋವನ್ ಟೂತ್ ಎಂಬ ಆಫ್-ಡ್ಯೂಟಿ ಪೈಲಟ್‌ಗಳು ತಕ್ಷಣ ನಿಯಂತ್ರಣ ಕೈಗೆ ತೆಗೆದುಕೊಂಡು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಿಸಿದರು. ಹಾರಾಟದ ಸಮಯದ ನಿಯಮಗಳ ಕಾರಣಕ್ಕಾಗಿ ಇವರಿಬ್ಬರೂ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
170ಕ್ಕೂ ಹೆಚ್ಚು ಜನರ ಜೀವ ಉಳಿಸಿದ ಸಿಬ್ಬಂದಿಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 'ಫಸ್ಟ್ ಕ್ಲಾಸ್ ಆರ್ಡರ್ ಆಫ್ ಜಾಯೆದ್ II' ಗೌರವ ನೀಡಿದ್ದರು. ಅಂದು ರಹಸ್ಯವಾಗಿದ್ದ ಆ ಸಾಹಸಿ ಆಫ್-ಡ್ಯೂಟಿ ಪೈಲಟ್‌ಗಳ ಹೆಸರು ಹಾಗೂ ವಿವರಗಳು ಈಗ 'ಟೈಮ್ಸ್ ಆಫ್ ಇಸ್ರೇಲ್' ವರದಿಯ ಮೂಲಕ ಹೊರಬಿದ್ದಿವೆ.