ನ್ಯೂಸ್

ತಮಿಳುನಾಡಿನ ಡಿಎಂಕೆ ನಾಯಕನ ಮೇಲೆ ಬೆಂಗಳೂರಿನಲ್ಲಿ ಮಾರಣಾಂತಿಕ ಹಲ್ಲೆ!; ಹೋಟೆಲ್​ ಒಳಗೇ ನಡೆದ ದಾಳಿ

ಬೆಂಗಳೂರು: ತಮಿಳುನಾಡಿನಿಂದ ಬಂದಿದ್ದ ಡಿಎಂಕೆ ನಾಯಕನೊಬ್ಬನ ಮೇಲೆ ಬೆಂಗಳೂರಿನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಹಿಂಬಾಲಿಸಿಕೊಂಡು ಬಂದಿದ್ದ ವಿರೋಧಿಗಳು ಹೋಟೆಲೊಂದರಲ್ಲಿ ಚಹಾ ಕುಡಿಯುತ್ತಿರುವಾಗ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.

ಡಿಎಂಕೆ ನಾಯಕ ವಿ.ಕೆ.ಗುರುಸ್ವಾಮಿ (55) ಹಲ್ಲೆಗೀಡಾದ ವ್ಯಕ್ತಿ. ಬಾಣಸವಾಡಿಯ ಕಮ್ಮನಹಳ್ಳಿ ಸುಖಸಾಗರ್ ಹೊಟೇಲ್ ಒಳಗೆ ಈ ಘಟನೆ ನಡೆದಿದೆ. ತಮಿಳುನಾಡಿನಿಂದ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಐವರು, ಗುರುಸ್ವಾಮಿ ಚಹಾ ಕುಡಿಯುತ್ತಿದ್ದಾಗ ಮಚ್ಚು ಲಾಂಗ್​ನಿಂದ ಹಲ್ಲೆ ಮಾಡಿದ್ದಾರೆ.

ಗುರುಸ್ವಾಮಿ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಟ್ಯಾಕ್ ಹಿಂದಿದ್ಯಾ 30 ವರ್ಷಗಳ ಗ್ಯಾಂಗ್​ವಾರ್!?

ಹಲ್ಲೆಗೊಳಾಗಿರುವ ಗುರುಸ್ವಾಮಿಗೆ ಎಐಎಡಿಎಂಕೆ ನಾಯಕ ಅಟ್ಯಾಕ್ ಪಾಂಡಿಯನ್ ಜೊತೆಗೆ ಹಲವು ವರ್ಷಗಳಿಂದ ವೈರತ್ವ ಇದೆ ಎನ್ನಲಾಗಿದೆ. ಇವರಿಬ್ಬರ ಗ್ಯಾಂಗ್​ವಾರ್​​ನಿಂದಾಗಿ ಸರಣಿ ಕೊಲೆಗಳಾಗಿದ್ದು, 20 ಮಂದಿ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಇದೆ. ತಮಿಳುನಾಡಿನಲ್ಲಿ ಇವರ ಗ್ಯಾಂಗ್​ವಾರ್ ಸಾಕಷ್ಟು ಸದ್ದು ಮಾಡಿತ್ತು.

ಹಳೇ ದ್ವೇಷದ ಹಿನ್ನೆಲೆಯಲ್ಲಿ ತಮಿಳುನಾಡಿನಿಂದಲೇ ಗುರುಸ್ವಾಮಿಯನ್ನು ಈ ತಂಡ ಹಿಂಬಾಲಿಸಿಕೊಂಡು ಬಂದಿತ್ತು. ಲಿಟಿಗೇಷನ್ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಗುರುಸ್ವಾಮಿ ಬೆಂಗಳೂರಿಗೆ ಬಂದಿದ್ದ. ಹೋಟೆಲ್​ನಲ್ಲಿ ಬ್ರೋಕರ್ ಜತೆ ಮಾತನಾಡುತ್ತಿದ್ದಾಗ ಈ ದಾಳಿ ನಡೆದಿದೆ. ಗುರುಸ್ವಾಮಿ ಪರಿಸ್ಥಿತಿ ಗಂಭೀರವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.