ಬೆಂಗಳೂರು: ಸ್ಪಾ ಹೆಸರಿನಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಸ್ಪಾ ಮ್ಯಾನೇಜರ್ ನವೀನ್(೨೬) ಮತ್ತು ಸಹಾಯಕ ಭರತ್ ಸಿಂಗ್(೨೭) ಬಂಧಿತರು.
ದಾಳಿ ವೇಳೆ ಮೂರು ಸಾವಿರ ರೂ. ನಗದು, ಎರಡು ವಾಕಿಟಾಕಿ, ಮೊಬೈಲ್, ಸ್ವಾಪಿಂಗ್ ಯಂತ್ರ, ಕಾಂಡೋಮ್ಸ್ ಸೇರಿ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಸ್ಪಾ ಮಾಲೀಕ ಭೀಮಾ ನಾಯಕ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರತ್‌ಹಳ್ಳಿಯ ಹೊರವರ್ತುಲ ರಸ್ತೆಯ ಲಕ್ಷದೀಪ ಕಾಂಪ್ಲೆಕ್ಸ್‌ನ ೧ನೇ ಮಹಡಿಯ ವಿಐಪಿ ಹೆಸರಿನ ಸ್ಪಾದಲ್ಲಿ ಹೊರರಾಜ್ಯದ ಹುಡುಗಿರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಸ್ಪಾ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದೆಹಲಿ, ಪಶ್ಚಿಮ ಬಂಗಾಳ, ಅಸ್ಸಾಂ, ಥೈಲ್ಯಾಂಡ್ ಮೂಲದ ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ಹಣದ ಆಮೀಷವೊಡ್ಡುತ್ತಿದ್ದ ಆರೋಪಿಗಳು:
ಸ್ಪಾ ಮಾಲೀಕ ಭೀಮಾನಾಯಕ್, ನವೀನ್, ಭರತ್ ಸಿಂಗ್ ರಾಜ್ಯ ಹಾಗೂ ಹೊರರಾಜ್ಯದ ಅಮಾಯಕ ಮಹಿಳೆಯರಿಗೆ ಉದ್ಯೋಗ ಆಸೆ ತೋರಿಸಿ ಸ್ಪಾಗೆ ಕರೆತಂದು ಹಣದ ಆಮೀಷವೊಡ್ಡಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸ್ಪಾ ಮಾಲೀಕ ಭೀಮಾ ನಾಯಕ್ ಬಂಧನಕ್ಕೆ ಬಲೆ ಬೀಸಲಾಗಿದೆ. ಆತನ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನೈತಿಕ ಚಟುವಟಿಕೆ ಬಗ್ಗೆ ದೂರು ನೀಡಿ:
ಈ ರೀತಿಯ ಅನೈತಿಕ ಚಟುವಟಿಕೆಗಳು ಕಂಡು ಬಂದಲ್ಲಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಮೊಬೈಲ್ ಸಂಖ್ಯೆ ೯೪೮೦೮೦೧೦೮೪, ಮಾರತ್‌ಹಳ್ಳಿ ಉಪ ವಿಭಾಗದ ಎಸಿಪಿ-೯೪೮೦೮೦೧೬೦೭ ಅಥವಾ ಎಚ್‌ಎಎಲ್ ಠಾಣೆ ಇನ್ಸ್‌ಪೆಕ್ಟರ್ ಮೊಬೈಲ್ ಸಂಖ್ಯೆ ೯೪೮೦೮೦೧೬೧೬ ಗೆ ಸಂಪರ್ಕಿಸಿ ನಿರ್ಭೀತಿಯಿಂದ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.