ಬೆಂಗಳೂರು: ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಮೇಲಿನ ಮಾರಣಾಂತಿಕ ಹಲ್ಲೆಗೆ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರ ನೇರ ಕಾರಣವೆಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೆಲೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ. ಪಕ್ಷದ ಕಾರ್ಯಕರ್ತರ ಮೇಲೆ ಪ್ರತಿದಿನ ಹಲ್ಲೆ, ದಬ್ಬಾಳಿಕೆ ಬೆದರಿಕೆ, ಸುಳ್ಳು ಮೊಕದ್ದಮೆ ಹೂಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲೇ ಮಣಿಕಂಠ ರಾಠೋಡ್‌ರನ್ನು ಪ್ರಿಯಾಂಕ್ ಖರ್ಗೆ ಟಾರ್ಗೆಟ್ ಮಾಡಿದ್ದರು. ಅಧಿಕಾರಕ್ಕೆ ಬಂದ ನಂತರ ಇನ್ನಿಲ್ಲದ ಕಿರುಕುಳ ನೀಡಿ, ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ದ್ವೇಷ ರಾಜಕಾರಣವನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ, ಕಾರ್ಯಕರ್ತರಿಂದ ತಕ್ಕಪಾಠ ಕಲಿಸಬೇಕಾಗುತ್ತದೆ. ಸುಳ್ಳು ದಾವೆ, ಬೆದರಿಕೆಗಳಿಂದ ಪಕ್ಷ ಹಾಗೂ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸಲಾಗದು ಎಂದು ಎಚ್ಚರಿಸಿದ್ದಾರೆ.
ಮಣಿಕಂಠ ರಾಠೋಡ್ ಜೀವಕ್ಕೆ ಏನಾದರೂ ಹಾನಿಯಾದರೆ ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿ, ಸರ್ಕಾರವೇ ಹೊಣೆಯಾಗುತ್ತದೆ. ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.