ನ್ಯೂಸ್

ಪ್ರೇಯಸಿ ಜತೆಗಿನ ಗೆಳೆತನಕ್ಕೆ ಯುವಕನ ಮೇಲೆ ಹಲ್ಲೆ

ಬೆಂಗಳೂರು: ಪ್ರೀತಿಸಿದ ಯುವತಿ ಜೊತೆಗೆ ಸ್ನೇಹ ಬೆಳೆಸಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಶಂಕರಪುರ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಕಲ್ಲಸಂದ್ರ ನಿವಾಸಿ ಹರ್ಷಿತ್ (24) ಹಲ್ಲೆಗೆ ಒಳಗಾದವ. ಅಂಗೈ ಕಟ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ತಂದೆ ಶಿವಪ್ಪ ಎಂಬುವರು ಕೊಟ್ಟ ದೂರಿನ ಮೇರೆಗೆ ಶಶಾಂಕ್ ಮತ್ತು ಚಂದನ್ ಎಂಬುವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಸವನಗುಡಿ ರಸ್ತೆಯಲ್ಲಿ ಇರುವ ಪುಲ್ವಾಡಿ ಫ್ಲವರ್ ಶಾಪ್ ಬಳಿ ಏ. 28ರಂದು ಕೃತ್ಯ ನಡೆದಿತ್ತು. ಬಿಕಾಂ ಪದವೀಧರ ಹರ್ಷಿತ್, ಶಂಕರಪುರ ಬಳಿ ತಂದೆ ನಡೆಸುತ್ತಿದ್ದ ಹೂವಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಟ್ಟಡದಲ್ಲಿದ್ದ ಡಯೋಗ್ನಾಸ್ಟಿಕ್ ಸೆಂಟರ್‌ನಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ಈ ಮಧ್ಯೆ ಚಿಲ್ಲರೆ ಹಣ ಕೇಳಲು ಬಂದಾಗ ಯುವತಿ ಮತ್ತು ಹರ್ಷಿತ್ ನಡುವೆ ಗೆಳೆತನ ಬೆಳೆದಿತ್ತು. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಕ್ರಮೆಣ ಪರಸ್ಪರರು ಚಾಟ್ ಮಾಡುತ್ತಿದ್ದರು. ಈ ವಿಷಯ ಯುವತಿಯನ್ನು ಪ್ರೀತಿಸುತ್ತಿದ್ದ ಶಶಾಂಕ್ ಗಮನಕ್ಕೆ ಬಂದು ಕುಪಿತಗೊಂಡಿದ್ದ.

ಹರ್ಷಿತ್ ಮೇಲೆ ದ್ವೇಷ ಸಾಧಿಸಿದ ಶಶಾಂಕ್, ತನ್ನ ಸ್ನೇಹಿತ ಚಂದನ್ ಜತೆಗೂಡಿ ಕಂಠಮಟ್ಟ ಮದ್ಯ ಸೇವನೆ ಮಾಡಿಕೊಂಡು ಲಾಂಗ್ ಜೊತೆಗೆ ಬೈಕ್‌ನಲ್ಲಿ ಹೋಗಿ ಹರ್ಷಿತ್ ಅಂಗಡಿಗೆ ನುಗ್ಗಿ ಹಲ್ಲೆ ಮಾಡಿದ್ದ. ಎಡಗೈ ಮುಂಗೈ ಮತ್ತು ತೋಳಿನಲ್ಲಿ ಗಂಭೀರವಾಗಿ ಗಾಯಗೊಂಡು ಹರ್ಷಿತ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ