America : ವಿಶ್ವದ ದೊಡ್ಡಣ್ಣ ವರ್ಜೀನಿಯಾದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ತಂದೆ ಮತ್ತು ಮಗಳು ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ಗುಜರಾತ್ ಮೂಲದ ಪ್ರದೀಪ್ ಪಟೇಲ್ ಮತ್ತು ಉರ್ಮಿ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಿದ ಶಂಕಿತ ಫ್ರೇಸರ್ ದೇವನ್ ವಾರ್ಟನ್ (44) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರ್ಜೀನಿಯಾ ಪೊಲೀಸರು ತಿಳಿಸಿದ್ದಾರೆ.
ವಿವರಗಳ ಪ್ರಕಾರ, ಪ್ರದೀಪ್ ಪಟೇಲ್ ಮತ್ತು ಅವರ ಮಗಳು ಉರ್ಮಿ ಗುರುವಾರ ವರ್ಜೀನಿಯಾದ ಅಕೋಮ್ಯಾಕ್ ಕೌಂಟಿಯಲ್ಲಿರುವ ಡಿಪಾರ್ಟ್‌ಮೆಂಟ್ ಸ್ಟೋರ್‌ಗೆ ಹೋಗಿದ್ದರು. ಇಬ್ಬರು ಅಂಗಡಿಯಲ್ಲಿದ್ದಾಗ, ಆರೋಪಿ ಫ್ರೇಸರ್ ದೇವನ್ ವಾರ್ಟನ್ ಅಲ್ಲಿಗೆ ಭೇಟಿ ನೀಡಿದ್ದ. ಔಷಧಿ ವಿಚಾರಕ್ಕೆ ಆತ, ಅಂಗಡಿಯ ಸಿಬ್ಬಂದಿಯ ಜತೆ ಜಗಳಕ್ಕಿಳಿದ. ಈ ವೇಳೆ ಆರೋಪಿ ಮತ್ತು ಅಂಗಡಿ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದ್ದು, ತಾಳ್ಮೆ ಕಳೆದುಕೊಂಡ ಆರೋಪಿ ವಾರ್ಟನ್, ಅಂಗಡಿಯಲ್ಲಿದ್ದ ಕಾರ್ಮಿಕರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ.
ಇದೇ ಗುಂಡಿನ ದಾಳಿಯಲ್ಲಿ ಪ್ರದೀಪ್ ಕುಮಾರ್ ಮತ್ತು ಉರ್ಮಿ ಗಂಭೀರವಾಗಿ ಗಾಯಗೊಂಡರು. ಪ್ರದೀಪ್ ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಉರ್ಮಿ ಗಂಭೀರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಕೊನೆಯುಸಿರೆಳೆದಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಗುಂಡು ಹಾರಿಸಿದ ಫ್ರೇಸರ್‌ನನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ.
ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ನಿವಾಸಿ ಪ್ರದೀಪ್ ಪಟೇಲ್ ತಮ್ಮ ಪತ್ನಿ ಹನ್ಸ್‌ಬೆನ್ ಮತ್ತು ಮಗಳು ಉರ್ಮಿ ಅವರೊಂದಿಗೆ ಆರು ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಅವರು ಅಲ್ಲಿನ ತಮ್ಮ ಸಂಬಂಧಿಕರ ಒಡೆತನದ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದರು. ಮೃತ ಪ್ರದೀಪ್ ಕುಮಾರ್‌ಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರು ಅಹಮದಾಬಾದ್‌ನಲ್ಲಿದ್ದರೆ, ಇನ್ನೊಬ್ಬರು ಕೆನಡಾದಲ್ಲಿದ್ದಾರೆ. ಪ್ರದೀಪ್ ಮತ್ತು ಉರ್ಮಿ ಸಾವಿನಿಂದ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ. (ಏಜೆನ್ಸೀಸ್)