ಕೋಲಾರ: ಸರ್ಕಾರಿ ಅಧಿಕಾರಿಗಳು ಜನರ ಬಳಿ ಹೋಗಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕು. ಸಭೆಗೆ ಗೈರು ಹಾಜರಿಯಾದರೆ ಏನಾರ್ಥ, ಮೊದಲು ಗೈರಾದವರ ವಿರುದ್ಧ ಅಟ್ರಾಸಿಟಿ ದೂರು ದಾಖಲಿಸಬೇಕು ಎಂದು ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಟ್ರಾಸಿಟಿ ಸಮಿತಿ ಸಭೆಯಲ್ಲಿ ಮಾತನಾಡಿ, ಕಳೆದ ಸಭೆಗೂ ಕೆಲ ಅಧಿಕಾರಿಗಳು ತಪ್ಪಿಸಿಕೊಂಡಿದ್ದರು. ಆಗಲೂ ಎಚ್ಚರಿಕೆ ನೀಡಲಾಗಿತ್ತು, ಅದಾಗಿಯೂ ಮತ್ತೆ ಗೈರು ಆಗಿದ್ದಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಕಳೆದ ಸಭೆಯಲ್ಲಿ ಚರ್ಚಿಸಲಾದ ಸಮಸ್ಯೆಗಳ ಬಗ್ಗೆ ಮತ್ತೆ ಇಲ್ಲೂ ಪ್ರಸ್ತಾಪಿಸಲಾಗಿದೆ. ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂಬುದು ಅರ್ಥವಾಗುತ್ತಿದೆ. ಮುಂದಿನ ದಿನಗಳಲ್ಲಿ ಮರುಕಳುಹಿಸಬಾರದು, ಇಲ್ಲದಿದ್ದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾತಿ ಪದ್ಧತಿಯೂ 10ನೇ ಶತಮಾನದಿಂದ ನಡೆದುಕೊಂಡು ಬಂದಿದೆ. ಇದನ್ನು ಹೋಗಲಾಡಿಸಲು ನಾವು ಮಾಡುತ್ತಿರುವ ಅಳಿಲು ಸೇವೆಯಷ್ಟೇ. ಶೋಷಿತ ಸಮುದಾಯಗಳ ಜನರ ಸಮಸ್ಯೆಗಳ ಆಲಿಸದಿದ್ದರೆ ಹೇಗೆ ?, ಸಮಿತಿ ಸಭೆಗಳನ್ನು ನಡೆಸದೆ ಇರುವ ಬಗ್ಗೆ ಸಿಎಂ ಅವರೇ ಚಾಟಿ ಬಿಸಿದ್ದಾರೆ. ಸಭೆ ಕೆರೆಯುವುದು ಗಂಭೀರ ವಿಚಾರಗಳ ಬಗ್ಗೆ ಚರ್ಚೆ ಮಾಡಲು. ಟೈಂ ಪಾಸ್ ಸಭೆಗಳು ಆಗಬಾರದು. ದಪ್ಪ ಚರ್ಮವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಅಂತರ್ಜಾತಿ ವಿವಾಹದ ಹಣಕ್ಕಾಗಿ ಸಾರ್ವಜನಿಕರು ಕಚೇರಿಗೆ ಅಲೆಯುವ ಪರಿಸ್ಥಿತಿ ಇರಬಾರದು, ಸಮಾಜ ಕಲ್ಯಾಣ ಇಲಾಖೆಗೆ ಸಾಕಷ್ಟು ಹಣ ಸರ್ಕಾರದಿಂದ ಬರುತ್ತಿದೆ, ವಿಳಂಬ ಮಾಡದೆ ಬಿಡುಗಡೆ ಮಾಡಬೇಕು ಎಂದು ತಿಳಿಸಿದರು.
ಗಣಿ ಮತ್ತು ವಿಜ್ಞಾನ ಅಧಿಕಾರಿ, ಆರ್ಟಿಒ ಅಧಿಕಾರಿ ಮೇಲೆ ಮೊದಲು ಅಟ್ರಾಸಿಟಿ ಹಾಕಬೇಕು. ಜಾಗೃತಿ ಸಭೆ ಎಂದರೆ ಅಲಕ್ಷ್ಯ ಯಾಕೆ?. ನೊಟೀಸ್ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಚನ್ನಬಸಪ್ಪಗೆ ಸೂಚಿಸಿದರು.
* ಇ-ಸ್ವತ್ತು ನೀಡಲು ವಿಳಂಬ
ಜಾಗೃತಿ ಸಮಿತಿ ಸದಸ್ಯ ರವೀಂದ್ರನಾಥ್ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇ&ಸ್ವತ್ತು ದಾಖಲೆಗಾಗಿ ಅರ್ಜಿ ಸಲ್ಲಿಸಿದರೆ ತಿಂಗಳಾನುಗಟ್ಟಲೆ ಓಡಾಡಿಸಿಕೊಳ್ಳುತ್ತಾರೆ. ಕೇಳಿದರೆ ಸಬೂಬು ಹೇಳುತ್ತಾರೆ. ಇದರಿಂದಾಗಿ ಪಿಡಿಒ, ಸಿಬ್ಬಂದಿಗೆ ಬಿಸಿ ಮುಟ್ಟಿಸಿ ಸಕಾಲದಲ್ಲಿ ದಾಖಲೆ ನೀಡಲು ಸೂಚಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಲೂರು ತಾಪಂ ಇಒ ದಿಶಾಂಕ್ ತಾಂತ್ರಿಕ ದೋಷ ಸಮಸ್ಯೆ ಬಗೆಹರಿದ ಕೂಡಲೇ ಸಕಾಲಕ್ಕೆ ದಾಖಲೆ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
* ಹಾಸ್ಟಲ್ಗಳಲ್ಲಿ ಹೆಚ್ಚುವರಿ ಬಿಲ್ ಡ್ರಾ
ಸದಸ್ಯ ರವೀಂದ್ರ ಮಾತನಾಡಿ, ಸರ್ಕಾರಿ ಎಸ್ಸಿ, ಎಸ್ಟಿ ಹಾಸ್ಟೆಲ್ಗಳಲ್ಲಿ ಆಹಾರ ಪದಾರ್ಥಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ಹಾಸ್ಟಲ್ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ವಾಸ ಇರುವುದಿಲ್ಲ. ಆದರೆ ಪದಾರ್ಥಗಳು ಖರೀದಿ ಮಾಡಿರುವ ಹಾಗೆ ಬಿಲ್ ಡ್ರಾ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು. ಸದಸ್ಯರು ಸಭೆಯ ಗಮನಕ್ಕೆ ತಂದಿರುವ ವಿಚಾರಗಳನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳು ಗಮನ ಹರಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕು. ಅನಿರೀತ ಹಾಸ್ಟೆಲ್ ಭೇಟಿ ಸಮಯದಲ್ಲಿ ವಿದ್ಯಾರ್ಥಿಗಳು ದೂರು ನೀಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.